
ದುಬೈ: ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಜಾಗತಿಕ ಕ್ರಿಕೆಟ್ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ಪತನ ಮಾಡಿರುವ RO-KO ಖ್ಯಾತಿಯ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಅತ್ಯಪರೂಪದ ದಾಖಲೆಯತ್ತ ದಾಪುಗಾಲಿರಿಸಿದ್ದಾರೆ.
ಹೌದು.. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಬ್ಬರ ಮುಂದುವರೆದಿದ್ದು, ಈಗಾಗಲೇ ಸಾಕಷ್ಟು ದಾಖಲೆಗಳನ್ನು ಹಿಂದಿಕ್ಕಿರುವ ಕೊಹ್ಲಿ-ರೋಹಿತ್ ಜೋಡಿ ಸಚಿನ್ ರ ಮತ್ತೊಂದು ದಾಖಲೆಯತ್ತ ದಾಪುಗಾಲಿರಿಸಿದ್ದಾರೆ.
ಹೌದು.. ದುಬೈನಲ್ಲಿ ನಿನ್ನೆ ನಡೆದ ಆಸ್ಚ್ರೇಲಿಯಾ ವಿರುದ್ಧ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ 84 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಅಂತೆಯೇ ಕೊಹ್ಲಿ ಐಸಿಸಿ ಟೂರ್ನಿಗಳಲ್ಲಿ ಭಾರತದ ಪರ ಅತೀ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಭಾರತದ 3ನೇ ಮತ್ತು ಜಾಗತಿಕ 4ನೇ ಆಟಗಾರ ಎಂಬ ಕೀರ್ತಿಗೂ ಭಾಜನರಾದರು. ಐಸಿಸಿ ಏಕದಿನ ಟೂರ್ನಿಯಲ್ಲಿ ಕೊಹ್ಲಿಗೆ ಇದು 7ನೇ ಪಂದ್ಯಶ್ರೇಷ್ಟ ಪ್ರಶಸ್ತಿಯಾಗಿದೆ.
ಅಂತೆಯೇ ಈ ಪಟ್ಟಿಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು, ಐಸಿಸಿ ಏಕದಿನ ಟೂರ್ನಿಗಳಲ್ಲಿ ಸಚಿನ್ ತಮ್ಮ ವೃತ್ತಿ ಜೀವನದಲ್ಲಿ ಬರೊಬ್ಬರಿ 10 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಾಗತಿಕವಾಗಿ ಯಾವುದೇ ಆಟಗಾರ ಈ ಸಾಧನೆ ಮಾಡಿಲ್ಲ. ಆಸ್ಚ್ರೇಲಿಯಾದ ಮಾಜಿ ದಂತಕಥೆ ಗ್ಲೆನ್ ಮೆಗ್ರಾತ್ ಮಾತ್ರ 8 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿ ಈ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ.
Most POTM awards in ICC ODI tournaments
10 - Sachin Tendulkar
8 - Glenn McGrath
8 - Rohit Sharma
7 - Virat Kohli
ಸಚಿನ್ ದಾಖಲೆಯಲ್ಲಿ ಇಬ್ಬರು ಭಾರತೀಯರು
ಇನ್ನು ಈ ಪಟ್ಟಿಯಲ್ಲಿ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ 8 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ರೋಹಿತ್ ಶರ್ಮಾ ಜಂಟಿ 2ನೇ ಸ್ಥಾನದಲ್ಲಿದ್ದು, 7 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಇನ್ನೂ ಒಂದು ಪಂದ್ಯ ಅಂದರೆ ಫೈನಲ್ ಪಂದ್ಯ ಆಡಲಿದ್ದು, ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ ಮೆಗ್ರಾತ್ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಅಂತೆಯೇ ಕೊಹ್ಲಿ ಈ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಮೆಗ್ರಾತ್ ಮತ್ತು ರೋಹಿತ್ ಶರ್ಮಾ ದಾಖಲೆಯನ್ನು ಸಮಬಲಗೊಳಿಸಲಿದ್ದಾರೆ.
Advertisement