
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದರ ನಡುವೆ ಇದೀಗ ಎಲ್ಲರ ಚಿತ್ತ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರತ್ತ ನೆಟ್ಟಿದೆ.
ಈ ಟೂರ್ನಿ ರೋಹಿತ್ ಶರ್ಮಾ ಅವರಿಗೆ ಕೊನೆಯ ಐಸಿಸಿ ಟೂರ್ನಿಯಾಗಿದ್ದು, ಅವರು ಟೂರ್ನಿ ಬಳಿಕ ನಿವೃತ್ತಿಯಾಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಈ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಅತ್ತ ಭಾರತ ಮಾಜಿ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಮಾತ್ರ ರೋಹಿತ್ ಶರ್ಮಾ ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ. ಹೀಗಾಗಿ ಅವರು ಇನ್ನೂ ಸಾಕಷ್ಟು ವರ್ಷಗಳ ಕ್ರಿಕೆಟ್ ಆಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ರೋಹಿತ್ ಶರ್ಮಾ ಬ್ಯಾಟಿಂಗ್ ಸಾಮರ್ಥ್ಯದ ಕುರಿತು ಮಾತನಾಡಿರುವ ಗವಾಸ್ಕರ್, 'ರೋಹಿತ್ ಶರ್ಮಾ ಕೇವಲ 25-30 ರನ್ ಗಳಿಸುವುದರಲ್ಲಿ ತೃಪ್ತರಾಗಬಾರದು ಮತ್ತು ದೀರ್ಘ ಇನ್ನಿಂಗ್ಸ್ ನಿರ್ಮಿಸುವತ್ತ ಗಮನಹರಿಸಬೇಕು ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ಕ್ರೀಸ್ ನಲ್ಲಿ ಇದ್ದಷ್ಟೂ ಸಮಯ ಭಾರತo ಪರ ಪಂದ್ಯವನ್ನು ಬದಲಾಯಿಸುವ ಪರಿಣಾಮವನ್ನು ಬೀರುತ್ತದೆ. ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ತಂಡಕ್ಕೆ ತ್ವರಿತ ಆರಂಭವನ್ನು ನೀಡಲು ಆಕ್ರಮಣಕಾರಿ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಇದು ಆಗಾಗ್ಗೆ ಆರಂಭಿಕ ಔಟ್‌ಗಳಿಗೆ ಕಾರಣವಾಗಿದೆ. ಪ್ರಸ್ತುತ ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರ ಅತ್ಯಧಿಕ ಸ್ಕೋರ್ ಬಾಂಗ್ಲಾದೇಶ ವಿರುದ್ಧ ಆರಂಭಿಕ ಪಂದ್ಯದಲ್ಲಿ 41 ರನ್ ಆಗಿದೆ. ಹೀಗಾಗಿ ಅವರು ತಮ್ಮ ಪ್ರದರ್ಶನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಗವಾಸ್ಕರ್ ಹೇಳಿದ್ದಾರೆ.
"ರೋಹಿತ್ ಶರ್ಮಾ ಕನಿಷ್ಛ 25 ಓವರ್‌ಗಳಾದರೂ ಬ್ಯಾಟಿಂಗ್ ಮಾಡಿದರೆ, ಭಾರತ ಆಗ 180-200ರ ಆಸುಪಾಸಿನಲ್ಲಿರಲಿದೆ. ಆ ಹೊತ್ತಿಗೆ ಅವರು ಕೇವಲ ಒಂದೆರಡು ವಿಕೆಟ್‌ಗಳನ್ನು ಕಳೆದುಕೊಂಡಿದ್ದರೆ ಊಹಿಸಿ; ಅವರು ಏನು ಮಾಡಬಹುದು ಎಂದು ಯೋಚಿಸಿ. ಅವರು 350 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳನ್ನು ತಲುಪಬಹುದು. ಅವರು ಅದರ ಬಗ್ಗೆಯೂ ಸ್ವಲ್ಪ ಯೋಚಿಸಬೇಕು.
ಆಕ್ರಮಣಕಾರಿಯಾಗಿ ಆಡುವುದು ಒಂದು ವಿಷಯ. ಆದರೆ 25-30 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಲು ಅವಕಾಶ ನೀಡಲು ಎಲ್ಲೋ ಸ್ವಲ್ಪ ವಿವೇಚನೆ ಇರಬೇಕು. ಅವರು ಹಾಗೆ ಮಾಡಿದರೆ, ಅವರು ಎದುರಾಳಿಗಳಿಂದ ಪಂದ್ಯವನ್ನು ದೂರವಿಡುತ್ತಾರೆ. ಆ ರೀತಿಯ ಪರಿಣಾಮವೆಂದರೆ ಪಂದ್ಯ ಗೆಲ್ಲುವುದು ಎಂದು ಗವಾಸ್ಕರ್ ಹೇಳಿದ್ದಾರೆ.
ಅಂತೆಯೇ "ಒಬ್ಬ ಬ್ಯಾಟ್ಸ್‌ಮನ್ ಆಗಿ ನೀವು 25-30 ರನ್ ಗಳಿಸಿದ್ದಕ್ಕೆ ಸಂತೋಷವಾಗಿದ್ದೀರಾ? ನೀವು ಸಂತೋಷಪಡಬಾರದು! ಹಾಗಾಗಿ ನಾನು ಅವರಿಗೆ ಹೇಳುವುದು ಅದನ್ನೇ: ನೀವು ಕೇವಲ ಏಳು, ಎಂಟು ಅಥವಾ ಒಂಬತ್ತು ಓವರ್‌ಗಳ ಬದಲು 25 ಓವರ್‌ಗಳಿಗೆ ಬ್ಯಾಟಿಂಗ್ ಮಾಡಿದರೆ ತಂಡದ ಮೇಲೆ ನಿಮ್ಮ ಪ್ರಭಾವ ಇನ್ನೂ ಹೆಚ್ಚಾಗುತ್ತದೆ" ಎಂದು ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ವಿಡಿಯೋದಲ್ಲಿ ಗವಾಸ್ಕರ್ ತಿಳಿಸಿದ್ದಾರೆ.
ಅಂದಹಾಗೆ ರೋಹಿತ್ ಶರ್ಮಾ ಹಾಲಿ ಐಸಿಸಿ ಚಾಂಪಿಯನ್ಸ್ ಟೂರ್ನಮೆಂಟ್‌ನಲ್ಲಿ ಕ್ರಮವಾಗಿ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ 20, 15 ಮತ್ತು 28 ರನ್‌ಗಳನ್ನು ಗಳಿಸಿದ್ದಾರೆ. ಅವರ ಅತ್ಯಧಿಕ ಸ್ಕೋರ್ ಬಾಂಗ್ಲಾದೇಶ ವಿರುದ್ಧ ಆರಂಭಿಕ ಪಂದ್ಯದಲ್ಲಿ 41 ರನ್ ಆಗಿದೆ.
Advertisement