
ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಶರ್ಮಾ ಪಡೆ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಟ್ಟಕ್ಕೇರಿದೆ. ಪಂದ್ಯಾವಳಿಯ ಆರಂಭದಿಂದಲೂ ಸೋಲಿಲ್ಲದೆ ಮುನ್ನುಗ್ಗಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಭಾರತವು ದೇಶದ ಇತಿಹಾಸದಲ್ಲಿ ಮೂರನೇ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಪೈಕಿ ಒಂದು ಪ್ರಶಸ್ತಿಯನ್ನು ಮತ್ತೊಂದು ತಂಡದೊಂದಿಗೆ ಹಂಚಿಕೊಂಡಿದೆ.
ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) 20 ಕೋಟಿ ರೂ.ಗಳ ಬೃಹತ್ ನಗದು ಬಹುಮಾನ ನೀಡಿದೆ. ಕುತೂಹಲ ವಿಚಾರವೆಂದರೆ, ಇದು ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಖರೀದಿಯಾದ ರಿಷಭ್ ಪಂತ್ ಪಡೆದ ಸಂಬಳಕ್ಕಿಂತ ಕಡಿಮೆಯಾಗಿದೆ.
ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯು ರೋಹಿತ್ ಶರ್ಮಾ ನೇತೃತ್ವದ ತಂಡಕ್ಕೆ 20 ಕೋಟಿ ರೂ. ($2.24 ಮಿಲಿಯನ್) ಮೊತ್ತವನ್ನು ನೀಡಿದೆ. ಪಂದ್ಯಾವಳಿಯಲ್ಲಿ ಎರಡನೇ ಸ್ಥಾನ ಪಡೆದ ನ್ಯೂಜಿಲೆಂಡ್ ತಂಡಕ್ಕೆ 9.72 ಕೋಟಿ ರೂ. ($1.12 ಮಿಲಿಯನ್) ಬಹುಮಾನ ನೀಡಲಾಗಿದೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಒಂದೇ ಒಂದು ಪಂದ್ಯದಲ್ಲೂ ಭಾಗವಹಿಸದ ರಿಷಭ್ ಪಂತ್ ಅವರನ್ನು ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು 27 ಕೋಟಿ ರೂ.ಗಳಿಗೆ ಖರೀದಿಸಿದೆ.
ಟೀಂ ಇಂಡಿಯಾಗೆ ಬಿಸಿಸಿಐ ಶ್ಲಾಘನೆ
12 ವರ್ಷಗಳ ನಂತರ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದು ಮನೆಗೆ ತರುವಲ್ಲಿ ಯಶಸ್ವಿಯಾಗಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶ್ಲಾಘಿಸಿದೆ. ಭಾರತೀಯ ಆಟಗಾರರಿಗೆ ಬಿಸಿಸಿಐ ಕೂಡ ಬಹುಮಾನ ಘೋಷಿಸುವ ಸಾಧ್ಯತೆಯಿದೆ.
'ಆರಂಭದಿಂದಲೂ, ತಂಡವು ನಿರ್ಭೀತ ಮತ್ತು ಶಿಸ್ತಿನ ಕ್ರಿಕೆಟ್ ಆಡುವುದರೊಂದಿಗೆ ಅಸಾಧಾರಣ ಸವಾಲುಗಳನ್ನು ಎದುರಿಸಿದೆ. ಐಸಿಸಿ ಪಂದ್ಯಾವಳಿಯಲ್ಲಿ ಅವರ ಅಜೇಯ ಓಟವು ತಂಡದ ಸ್ಥಿರತೆ, ಕಾರ್ಯತಂತ್ರದ ಕಾರ್ಯಗತಗೊಳಿಸುವಿಕೆ ಮತ್ತು ಜಾಗತಿಕ ವೇದಿಕೆಯಲ್ಲಿ ಯಶಸ್ವಿಯಾಗಬೇಕೆಂಬ ಹಸಿವಿನ ನಿಜವಾದ ಪ್ರತಿಬಿಂಬವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದೆ' ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಲಾಗಿದೆ.
'ಕಳೆದ ವರ್ಷದ ಟಿ20 ವಿಶ್ವಕಪ್ ಯಶಸ್ಸಿನ ನಂತರ ಈ ಗೆಲುವು ಭಾರತೀಯ ಕ್ರಿಕೆಟ್‌ಗೆ ಒಂದು ಹೆಗ್ಗುರುತಾಗಿದೆ. ಮತ್ತೊಂದು ಜಾಗತಿಕ ಪಂದ್ಯಾವಳಿಯಲ್ಲಿ ಪ್ರಾಬಲ್ಯ ಸಾಧಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಮನೆಗೆ ತರುವುದು ಅದ್ಭುತ ಸಾಧನೆಯಾಗಿದೆ. ಈ ಐತಿಹಾಸಿಕ ಯಶಸ್ಸಿಗೆ ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಇಡೀ ತಂಡವನ್ನು ಅಭಿನಂದಿಸುತ್ತೇನೆ' ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದ್ದಾರೆ.
Advertisement