
ಬೆಂಗಳೂರು: ದೆಹಲಿ ಕ್ಯಾಪಿಟಲ್ಸ್ ತಂಡ ಸತತ ಮೂರನೇ ವರ್ಷ ಮಹಿಳಾ ಪ್ರೀಮಿಯರ್ ಲೀಗ್ (WPL 2025) ನ ನೇರ ಫೈನಲ್‌ಗೆ ಪ್ರವೇಶಿಸಿದೆ. ಬ್ರಬೋರ್ನ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) 11 ರನ್‌ನಿಂದ ಸೋತರು ಎಲಿಮಿನೇಟರ್ ಹಂತಕ್ಕೆ ಎಂಟ್ರಿ ಕೊಟ್ಟಿದ್ದರೆ ಆರ್ ಸಿಬಿ ತಂಡ ತನ್ನ ಪ್ರಯಾಣವನ್ನು ಅಂತ್ಯಗೊಳಿಸಿದೆ. ಪಂದ್ಯದಲ್ಲಿ ಆರ್ ಸಿಬಿ 199 ರನ್ ಪೇರಿಸಿದ್ದು ಮುಂಬೈ ತಂಡವನ್ನು 188 ರನ್ ಗಳಿಗೆ ಆಲೌಟ್ ಮಾಡಿತು.
ಇನ್ನು ಈ ಗೆಲುವಿನೊಂದಿಗೆ, ಆರ್‌ಸಿಬಿ ಟೂರ್ನಮೆಂಟ್ ಟೇಬಲ್‌ನಲ್ಲಿ ಕೊನೆಯ ಸ್ಥಾನ ಪಡೆಯದಂತೆ ನೋಡಿಕೊಂಡಿದೆ. ಸ್ಮೃತಿ ಮಂಧಾನ ನೇತೃತ್ವದ ತಂಡವು 6 ತಂಡಗಳ ಟೂರ್ನಿಯಲ್ಲಿ 8 ಪಂದ್ಯಗಳಿಂದ 6 ಅಂಕಗಳನ್ನು ಗಳಿಸುವ ಮೂಲಕ 5ನೇ ಸ್ಥಾನ ಗಳಿಸಿತು. ಮಂಗಳವಾರದ ಪಂದ್ಯದ ಫಲಿತಾಂಶದಂತೆ ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನದಲ್ಲಿದ್ದರೆ, ಗುಜರಾತ್ ಜೈಂಟ್ಸ್ ಮೂರನೇ ಸ್ಥಾನದಲ್ಲಿದ್ದು ಈ ಋತುವಿನ ಎಲಿಮಿನೇಟರ್‌ನಲ್ಲಿ ಈ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.
ಮಾರ್ಚ್ 13ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದ ಬಗ್ಗೆ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್‌ಪ್ರೀತ್ ಕೌರ್ ವಿಶ್ವಾಸ ವ್ಯಕ್ತಪಡಿಸಿದರು. ಗುಜರಾತ್ ವಿರುದ್ಧದ ತಮ್ಮ ಹಿಂದಿನ ದಾಖಲೆಯನ್ನು ಅವರು ಎತ್ತಿ ತೋರಿಸಿದರು ಮತ್ತು ತಂಡವು ಶಾಂತವಾಗಿರಬೇಕು ಮತ್ತು ಪಂದ್ಯದ ಸಣ್ಣ ಕ್ಷಣಗಳನ್ನು ಗೆಲ್ಲಬೇಕು ಎಂದು ಹೇಳಿದರು. "ನಾವು ಶಾಂತವಾಗಿರಬೇಕು ಮತ್ತು ಆ ಕ್ಷಣದಲ್ಲಿ ಬದುಕಬೇಕು. ಕ್ರಿಕೆಟ್ ಎಂದರೆ ಸಣ್ಣ ಕ್ಷಣಗಳನ್ನು ಗೆಲ್ಲುವ ಆಟ. ಗುಜರಾತ್ ವಿರುದ್ಧ ನಮಗೆ ಉತ್ತಮ ದಾಖಲೆ ಇದೆ. ಆದರೆ ಅವರು ಚೆನ್ನಾಗಿ ಆಡುತ್ತಿದ್ದಾರೆ ಎಂದು ಪಂದ್ಯದ ನಂತರ ಹರ್ಮನ್‌ಪ್ರೀತ್ ಹೇಳಿದರು.
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿರಾಶಾದಾಯಕ ಋತುವನ್ನು ಉತ್ತಮ ಪ್ರದರ್ಶನದೊಂದಿಗೆ ಕೊನೆಗೊಳಿಸಿತು. ಮುಂಬೈ ಇಂಡಿಯನ್ಸ್ ತಂಡವು WPL ಫೈನಲ್‌ಗೆ ನೇರ ಪ್ರವೇಶ ಪಡೆಯುವುದನ್ನು ತಡೆಯಿತು. ಮಂಗಳವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಮುಂಬೈ ಇಂಡಿಯನ್ಸ್ ತಂಡವನ್ನು 11 ರನ್‌ಗಳಿಂದ ಸೋಲಿಸಿ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಸಹಾಯ ಮಾಡಿತು. ಈ ಫಲಿತಾಂಶದೊಂದಿಗೆ, ಡೆಲ್ಲಿ ಕ್ಯಾಪಿಟಲ್ಸ್ ಮಾರ್ಚ್ 15 ರಂದು ನಡೆಯಲಿರುವ ಫೈನಲ್‌ಗೆ ನೇರ ಪ್ರವೇಶ ಪಡೆದಿದೆ. ಅದೇ ಸಮಯದಲ್ಲಿ, ಮುಂಬೈ ಇಂಡಿಯನ್ಸ್ ಮಾರ್ಚ್ 13 ರಂದು ಗುಜರಾತ್ ಜೈಂಟ್ಸ್ ವಿರುದ್ಧ ಎಲಿಮಿನೇಟರ್ ಆಡಬೇಕಾಗುತ್ತದೆ. ಡೆಲ್ಲಿ ಕ್ಯಾಪಿಟಲ್ಸ್ ಸತತ ಮೂರನೇ ವರ್ಷ ಫೈನಲ್ ತಲುಪಿದ್ದು, ಈ ಬಾರಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ.
Advertisement