
2025ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಮುಕ್ತಾಯಗೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 8 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಎರಡು ವರ್ಷಗಳ ನಂತರ ಡಬ್ಲ್ಯುಪಿಎಲ್ ಪ್ರಶಸ್ತಿಯನ್ನು ಮುಂಬೈ ಮರಳಿ ಪಡೆದಿದೆ. ಎರಡನೇ ಬಾರಿ ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿ ಗೆದ್ದುಕೊಂಡಿದ್ದು, ಮೂರು ಆವೃತ್ತಿಯಲ್ಲೂ ನೇರವಾಗಿ ಫೈನಲ್ ಪ್ರವೇಶಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲು ಕಂಡಿದೆ.
ಮುಂಬೈನ ಬ್ರಬೌರ್ನ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ಆರಂಭದಲ್ಲಿ ಈ ಮೊತ್ತವನ್ನು ಚೇಸ್ ಮಾಡಲು ಅಷ್ಟೇನು ಕಷ್ಟವಲ್ಲ ಎಂದೇ ಭಾವಿಸಲಾಗಿತ್ತು. ಆದರೆ, ಮುಂಬೈ ಬೌಲರ್‌ಗಳ ಆರ್ಭಟದ ಮುಂದೆ ಡೆಲ್ಲಿಯ ಯಾವೊಬ್ಬ ಬ್ಯಾಟರ್ ಹೆಚ್ಚುಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ.
ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ನಾಯಕಿ ಮೆಗ್ ಲ್ಯಾನಿಂಗ್ 13 ರನ್ ಗಳಿಸಿದರೆ, ಶೆಫಾಲಿ ವರ್ಮಾ 4 ರನ್ ಗಳಿಸಿ ಔಟಾದರು. ಜೆಸ್ ಜೊನಾಸೆನ್ 13 ರನ್ ಗಳಿಸಿ ಔಟಾದರೆ, ಜೆಮಿಮಾ ರೋಡ್ರಿಗಸ್ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅನ್ನಾಬೆಲ್ ಸದರ್ಲ್ಯಾಂಡ್ ಕೇವಲ 2 ರನ್ ಗಳಿಸಿದರೆ, ಮಾರಿಜನ್ನೆ ಕಾಪ್ 26 ಎಸೆತಗಳಲ್ಲಿ 40 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಕರ್ನಾಟಕದವರಾದ ನಿಕ್ಕಿ ಪ್ರಸಾದ್ 23 ಎಸೆತಗಳಲ್ಲಿ ಅಜೇಯ 25 ರನ್ ಗಳಿಸಿದರೂ, ಡೆಲ್ಲಿ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸತತ ಮೂರು ವರ್ಷ ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಫೈನಲ್ ಪ್ರವೇಶಿಸುತ್ತಿದ್ದರೂ ಒಂದು ಬಾರಿ ಕೂಡ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.
ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಎದುರಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲು ಕಂಡಿತ್ತು. ಈ ಮೂಲಕ ಆಗಲೂ ಪ್ರಶಸ್ತಿ ಗೆಲ್ಲಲಾಗದೆ ನಿರಾಸೆಯಿಂದ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು.
ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಎರಡನೇ ಬಾರಿಗೆ WPL ಪ್ರಶಸ್ತಿ ಗೆದ್ದಿರುವ ಮುಂಬೈ ಆಟಗಾರ್ತಿಯರ ಸಂಭ್ರಮ ಮುಗಿಲುಮುಟ್ಟಿತ್ತು. 44 ಎಸೆತಗಳಲ್ಲಿ 66 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಾಯಕಿ ಹರ್ಮನ್‌ಪ್ರೀತ್ ಕೌರ್, ಮುಂಬೈ ಇಂಡಿಯನ್ಸ್ ತಂಡದ ಒಡತಿ ನೀತಾ ಅಂಬಾನಿ ಅವರನ್ನು ತಬ್ಬಿಕೊಂಡು ಸಂಭ್ರಮಿಸಿದರು. ಕೊನೆಯ ಓವರ್‌ನಲ್ಲಿ 14 ರನ್‌ಗಳನ್ನು ತಡೆದ ನ್ಯಾಟ್ ಸಿವರ್-ಬ್ರಂಟ್ ಅವರನ್ನು ಕೂಡ ನೀತಾ ಅಂಬಾನಿ ತಬ್ಬಿಕೊಂಡರು.
ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಲ್‌ರೌಂಡರ್ ಆಗಿರುವ ದಕ್ಷಿಣ ಆಫ್ರಿಕಾದ ಅಂತರರಾಷ್ಟ್ರೀಯ ಆಟಗಾರ್ತಿ ಮರಿಜಾನ್ನೆ ಕಾಪ್ ಕಣ್ಣೀರು ಹಾಕಿದರು. ತಂಡದ ಸದಸ್ಯರು ಅವರನ್ನು ಸಮಾಧಾನಪಡಿಸಿದರು. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ಟಿ20 ವಿಶ್ವಕಪ್‌ಗಾಗಿ ದಕ್ಷಿಣ ಆಫ್ರಿಕಾ ತಂಡ ಸೋಲು ಕಂಡಿತ್ತು. ರಾಷ್ಟ್ರೀಯ ತಂಡದಲ್ಲಿ ಕಾಪ್ ಆಡಿದ್ದರು.
Advertisement