
ವಿಶ್ವದ ಶ್ರೀಮಂತ ಟಿ20 ಟೂರ್ನಿಯಾದ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಮಾರ್ಚ್ 22ರ ಶನಿವಾರದಂದು ಐಪಿಎಲ್ 2025ನೇ ಆವೃತ್ತಿಯ ಅದ್ದೂರಿ ಉದ್ಘಾಟನೆ ನಡೆಯಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ಸೆಣಸಲಿವೆ.
ಈ ಸಂದರ್ಭದಲ್ಲಿ, ಪಂದ್ಯಾವಳಿಯ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಅಗ್ರ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ತಿಳಿದುಕೊಳ್ಳೋಣ. ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಆಟಗಾರನನ್ನು ಟಿ20 ಸ್ವರೂಪದ ಅಲ್ಟಿಮೇಟ್ ಸಿಕ್ಸರ್ ಕಿಂಗ್ ಎಂದು ಪರಿಗಣಿಸಲಾಗುತ್ತದೆ.
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು
ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದವರ ಪಟ್ಟಿಯಲ್ಲಿ ನಂ. 1 ಸ್ಥಾನವನ್ನು 'ಯೂನಿವರ್ಸ್ ಬಾಸ್' ಎಂದೇ ಕರೆಸಿಕೊಳ್ಳುವ ಕ್ರಿಸ್ ಗೇಲ್ ಅಲಂಕರಿಸಿದ್ದಾರೆ. ಐಪಿಎಲ್‌ನಲ್ಲಿ ಕೆಕೆಆರ್, ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ ಪರ ಆಡಿರುವ 142 ಪಂದ್ಯಗಳಲ್ಲಿ 357 ಸಿಕ್ಸರ್‌ಗಳೊಂದಿಗೆ 18ನೇ ಆವೃತ್ತಿ ಸಮೀಪಿಸುತ್ತಿದ್ದರೂ ಮೊದಲ ಸ್ಥಾನದಲ್ಲೇ ಇದ್ದಾರೆ. ಇದಲ್ಲದೆ 1056 ಸಿಕ್ಸರ್‌ಗಳೊಂದಿಗೆ ಟಿ20ಯಲ್ಲಿ ದಾಖಲೆ ಹೊಂದಿದ್ದಾರೆ.
ಐಪಿಎಲ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಡೆಕ್ಕನ್ ಚಾರ್ಜರ್ಸ್ ಪರ ಆಡಿರುವ 257 ಪಂದ್ಯಗಳಲ್ಲಿ 280 ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ.
ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡುತ್ತಿರುವ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ. ಇದರೊಂದಿಗೆ ವಿರಾಟ್, ಆರ್‌ಸಿಬಿ ಪರ ಆಡಿರುವ 252 ಪಂದ್ಯಗಳಲ್ಲಿ 272 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ 3ನೇ ಸ್ಥಾನದಲ್ಲಿದ್ದಾರೆ.
ನಾಲ್ಕನೇ ಸ್ಥಾನದಲ್ಲಿರುವ ಕ್ಯಾಪ್ಟನ್ ಕೂಲ್ ಎಂದೇ ಖ್ಯಾತರಾಗಿರುವ ಎಂಎಸ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಪರ 264 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ 252 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈಗಲೂ ಎಂಎಸ್ ಧೋನಿ ಸಿಎಸ್ಕೆ ಪರ ಆಡುತ್ತಿದ್ದಾರೆ.
ಎಬಿ ಡಿವಿಲಿಯರ್ಸ್ ಐದನೇ ಸ್ಥಾನದಲ್ಲಿದ್ದು, 2021 ರಲ್ಲಿ ನಿವೃತ್ತಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿರುವ 184 ಪಂದ್ಯಗಳಲ್ಲಿ 251 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಈ ಐವರ ಪೈಕಿ ಮೂರು ಜನರು ಆರ್‌ಸಿಬಿ ಪರವಾಗಿ ಆಡಿರುವುದು ವಿಶೇಷ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಮೂವರು ಟೀಂ ಇಂಡಿಯಾಗೆ ನಾಯಕರಾಗಿದ್ದವರು. ಕೊಹ್ಲಿ ಮತ್ತು ಧೋನಿ ಮಾಜಿ ನಾಯಕರಾಗಿದ್ದಾರೆ. ಸದ್ಯ ಮೂವರು ಈ ಬಾರಿಯ ಐಪಿಎಲ್‌ನಲ್ಲಿ ಆಡುತ್ತಿದ್ದು, ಮತ್ತಷ್ಟು ಸಿಕ್ಸರ್ ಮೂಲಕ ಪಟ್ಟಿಯಲ್ಲಿ ಏರು ಪೇರಾಗುವ ಸಾಧ್ಯತೆ ಇದೆ.
Advertisement