
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2025 ಕ್ರಿಕೆಟ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆ (ಬಿಸಿಸಿಐ) ಐಪಿಎಲ್ ಟೂರ್ನಿಯ ನಿಯಮಾವಳಿಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ.
ಹೌದು.. ಇದೇ ಶನಿವಾರ ಅಂದರೆ ಮಾರ್ಚ್ 22ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಚುಟುಕು ಕ್ರಿಕೆಟ್ ಟೂರ್ನಿ ಶುರುವಾಗುತ್ತದೆ. ಐಪಿಎಲ್ 18ನೇ ಋತುವಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐ ಮುಂದಾಗಿದೆ. ಕೊರೊನಾ ಸಂದರ್ಭದಲ್ಲಿ ನಿಷೇಧಿಸಲಾಗಿದ್ದ ಹಳೆ ನಿಯಮ ಮತ್ತೆ ಜಾರಿಗೆ ಬರುವ ಸಾಧ್ಯತೆ ಇದೆ.
ಕೊರೋನಾ ಸಮಯದಲ್ಲಿ ಹೇರಲಾಗಿದ್ದ ನಿಷೇಧ ತೆರವು!
ಈ ಹಿಂದೆ ಚೆಂಡಿನ ಮೇಲೆ ಲಾಲಾರಸ (Saliva) ಹಚ್ಚುವುದರ ಮೇಲಿದ್ದ ನಿಷೇಧವನ್ನು ಬಿಸಿಸಿಐ ತೆಗೆದುಹಾಕುವ ಸಾಧ್ಯತೆ ಇದೆ. ಈ ಬಗ್ಗೆ ಬಿಸಿಸಿಐನಲ್ಲಿ ವಿವರವಾಗಿ ಚರ್ಚಿಸಲಾಗಿದ್ದು, ಇಂದು ಮುಂಬೈನಲ್ಲಿ ನಡೆಯಲಿರುವ ಎಲ್ಲಾ ಐಪಿಎಲ್ ನಾಯಕ (IPL captain)ರ ಸಭೆಯಲ್ಲಿ ಈ ವಿಷಯವನ್ನಿಟ್ಟು ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐ ಮುಂದಾಗಿದೆ.
ಕೋವಿಡ್ -19 (Covid-19) ಸಾಂಕ್ರಾಮಿಕ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚೆಂಡಿಗೆ ಹೊಳಪು ಮಾಡಲು ಹಾಕಲಾಗುತ್ತಿದ್ದ ಲಾಲಾರಸ ಪದ್ಧತಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿಷೇಧಿಸಿತ್ತು. ಐಸಿಸಿ 2022 ರಲ್ಲಿ ಈ ನಿಷೇಧವನ್ನು ಶಾಶ್ವತಗೊಳಿಸಿದೆ. ಇದೀಗ ಇದೇ ನಿಯಮವನ್ನು ಬಿಸಿಸಿಐ ತೆರವುಗೊಳಿಸಲು ಮುಂದಾಗಿದೆ.
ಕೊರೊನಾಗೂ ಮುನ್ನ ಚೆಂಡಿನ ಮೇಲೆ ಲಾಲಾರಸ ಹಚ್ಚುವುದು ಸಾಮಾನ್ಯ ಅಭ್ಯಾಸವಾಗಿತ್ತು ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 'ಈಗ ಕೊರೊನಾ ಬೆದರಿಕೆ ಇಲ್ಲದಿರುವುದರಿಂದ, ಐಪಿಎಲ್‌ನಲ್ಲಿ ಚೆಂಡಿನ ಮೇಲೆ ಲಾಲಾರಸ ಹಚ್ಚುವ ನಿಷೇಧವನ್ನು ತೆಗೆದುಹಾಕುವುದರಿಂದ ಯಾವುದೇ ಹಾನಿಯಿಲ್ಲ ಎಂದವರು ತಿಳಿಸಿದ್ದಾರೆ.
ಲಾಲಾರಸಕ್ಕೆ ಮಹತ್ವ
ಚೆಂಡಿಗೆ ಲಾಲಾರಸ ಹಾಕುವುದರಿಂದ, ಕೆಂಪು ಚೆಂಡಿನ ಕ್ರಿಕೆಟ್ ಮೇಲೆ ಇದು ಭಾರಿ ಪರಿಣಾಮ ಬೀರುತ್ತದೆ. ಬಿಳಿ ಚೆಂಡಿನಲ್ಲಿ ಬೌಲರ್‌ಗಳಿಗೆ ಸ್ವಲ್ಪ ಸಹಾಯ ಮಾಡುತ್ತದೆ. ಹಾಗಾಗಿ ಐಪಿಎಲ್‌ನಲ್ಲಿ ಲಾಲಾರಸ ಅನ್ವಯಿಸಲು ಅವಕಾಶ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇಂದು ನಡೆಯುವ ಸಭೆಯಲ್ಲಿ ನಾಯಕರ ಅಭಿಪ್ರಾಯದ ನಂತರ ಅಂತಿಮ ನಿರ್ಧಾರ ಹೊರಬೀಳಲಿದೆ.
ಶಮಿ ಸೇರಿ ಸ್ಟಾರ್ ಬೌಲರ್ ಗಳ ಬೆಂಬಲ
ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಕೂಡ ಲಾಲಾರಸದ ಮಹತ್ವದ ಬಗ್ಗೆ ಹೇಳಿದ್ದರು. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸಂದರ್ಭದಲ್ಲಿ ಮಾತನಾಡಿದ್ದ ಅವರು, ಚೆಂಡಿನ ಮೇಲೆ ಲಾಲಾರಸ ಹಚ್ಚುವ ಅವಶ್ಯಕತೆಯಿದೆ, ಇಲ್ಲದಿದ್ದರೆ ಅದು ಸಂಪೂರ್ಣವಾಗಿ ಬ್ಯಾಟ್ಸ್‌ಮನ್‌ಗಳ ಪರವಾಗಿರುತ್ತದೆ ಎಂದಿದ್ದರು. ದಕ್ಷಿಣ ಆಫ್ರಿಕಾದ ವೆರ್ನಾನ್ ಫಿಲಾಂಡರ್ ಮತ್ತು ನ್ಯೂಜಿಲೆಂಡ್‌ನ ಟಿಮ್ ಸೌಥಿ ಕೂಡ ಇದನ್ನು ಬೆಂಬಲಿಸಿದ್ದರು.
Advertisement