
2024ನೇ ಐಪಿಎಲ್ ಆವೃತ್ತಿಯಲ್ಲಿ ರೋಹಿತ್ ಶರ್ಮಾರನ್ನು ಕೆಳಗಿಳಿಸಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾದ ಹಾರ್ದಿಕ್ ಪಾಂಡ್ಯಾರಿಗೆ ಸಂಕಷ್ಟ ಎದುರಾಗಿತ್ತು. ಎಷ್ಟರ ಮಟ್ಟಿಗೆ ಎಂದರೆ ಹಾರ್ದಿಕ್ ಮೈದಾನಕ್ಕೆ ಬಂದಾಗಲೂ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಮುಂಬೈ ಇಂಡಿಯನ್ಸ್ ತಂಡದ ಈ ನಡೆ ವಿರುದ್ಧ ಅಭಿಮಾನಿಗಳು ಮತ್ತು ತಜ್ಞರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಹಾರ್ದಿಕ್ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದವು. ತಂಡದಲ್ಲಿ ಎರಡು ಗುಂಪುಗಳಾಗಿದ್ದು, ಐಪಿಎಲ್‌ನಲ್ಲಿ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು ಎಂಬ ವರದಿಗಳು ಹೊರಹೊಮ್ಮಿದವು.
ತಮ್ಮನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ರೋಹಿತ್ ಶರ್ಮಾ ಅಸಮಾಧಾನಗೊಂಡಿದ್ದು, ಮುಂದಿನ ಆವೃತ್ತಿಯಲ್ಲಿ ಅವರು ಫ್ರಾಂಚೈಸಿಯಲ್ಲಿ ಉಳಿಯುತ್ತಾರೆಯೇ ಎಂಬ ಪ್ರಶ್ನೆಗಳು ಕೇಳಿಬಂದಿದ್ದವು. ಆದರೆ ಈ ಎಲ್ಲ ವದಂತಿಗಳಿಗೂ ತೆರೆಬಿದ್ದಿದ್ದು, ಸದ್ಯ ರೋಹಿತ್ ಮುಂಬೈ ಇಂಡಿಯನ್ಸ್ ತಂಡದಲ್ಲೇ ಉಳಿದುಕೊಂಡಿದ್ದಾರೆ.
ಐಪಿಎಲ್ 2024ರ ವೇಳೆ ಹಾರ್ದಿಕ್ ಪಾಂಡ್ಯ ಅವರಿಂದಲೂ ಅಷ್ಟೇನು ಉತ್ತಮ ಪ್ರದರ್ಶನ ಮೂಡಿಬಂದಿರಲಿಲ್ಲ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿಯೇ ಅಭಿಮಾನಿಗಳ ಒಂದು ಭಾಗವು ಆಲ್‌ರೌಂಡರ್ ಅನ್ನು ಹೀಯಾಳಿಸಿತು. ಇಷ್ಟೆಲ್ಲಾ ಇದ್ದರೂ ಚೇತರಿಸಿಕೊಂಡ ಹಾರ್ದಿಕ್, 2024ರ ಟಿ20 ವಿಶ್ವಕಪ್ ಮತ್ತು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಥ್ಯುತ್ತಮ ಪ್ರದರ್ಶನ ನೀಡಿದರು ಮತ್ತು ಭಾರತ ಕ್ರಿಕೆಟ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 2024ರ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು 'ಮಾನಸಿಕವಾಗಿ ಹಿಂಸಿಸಲಾಯಿತು' ಮತ್ತು ಮತ್ತೆ ಅವರು ಹೇಗೆ ಬೌನ್ಸ್ ಬ್ಯಾಕ್ ಆದರು ಎಂಬುದರ ಕುರಿತು 'ಬಯೋಪಿಕ್'ಗೆ ಅರ್ಹರು ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ತಿಳಿಸಿದ್ದಾರೆ.
'ಅವರು ಆ ನೋವನ್ನು ತಮ್ಮಲ್ಲೇ ಇಟ್ಟುಕೊಂಡು ಮುಂದೆ ಸಾಗಿದರು ಮತ್ತು ಅದು ಹಾರ್ದಿಕ್ ಪಾಂಡ್ಯ ಅವರ ಪುನರಾಗಮನದ ಕಥೆಯಾಗಿದೆ. ಅದು ಕೆಟ್ಟ ಪ್ರಯಾಣವಾಗಿತ್ತು. ಅಭಿಮಾನಿಗಳು ಅವರನ್ನು ಅಪಹಾಸ್ಯ ಮಾಡಿದರು ಮತ್ತು ಜನರು ಅವರನ್ನು ತಿರಸ್ಕರಿಸಿದರು. ಒಬ್ಬ ಆಟಗಾರನಾಗಿ, ಅಸಮಾಧಾನ, ಅವಮಾನಗಳೊಂದಿಗೆ ಮುಂದುವರಿಯುವುದು ಆಳವಾಗಿ ನೋವುಂಟು ಮಾಡುತ್ತದೆ. ಒಬ್ಬ ಆಟಗಾರ ಅದನ್ನು ಎಂದಿಗೂ ಮರೆಯುವುದಿಲ್ಲ. ನೀವು ಅವರನ್ನು ಕೈಬಿಡಬಹುದು, ಆದರೆ ಅವಮಾನಕ್ಕೊಳಗಾಗುವುದು ಒಳ್ಳೆಯ ಸಂಕೇತವಲ್ಲ. ಇದು ಆಟಗಾರನಿಗೆ ಮಾನಸಿಕ ಹಿಂಸೆಯಾಗಿ ಪರಿಣಮಿಸುತ್ತದೆ' ಎಂದು ಕೈಫ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
'ಮಾನಸಿಕ ಹಿಂಸೆ ಹಾರ್ದಿಕ್‌ಗೆ ಆಯಿತು. ಇಷ್ಟೆಲ್ಲ ಇದ್ದರೂ, ಅವರು ಟಿ20 ವಿಶ್ವಕಪ್‌ನಲ್ಲಿ ಆಡಿದರು. ಅಲ್ಲಿ ಅವರು ಫೈನಲ್‌ನಲ್ಲಿ ಹೆನ್ರಿಕ್ ಕ್ಲಾಸೆನ್ ಅವರ ವಿಕೆಟ್ ಪಡೆದರು. ನಂತರ, ಚಾಂಪಿಯನ್ಸ್ ಟ್ರೋಫಿಯಲ್ಲಿ, ಜಂಪಾ ವಿರುದ್ಧ ಸಿಕ್ಸರ್ ಬಾರಿಸಿದರು. ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರದರ್ಶನ ನೀಡಿದರು. ಸಿಂಹದಂತೆ ಹೋರಾಡಿದರು. ಅವರ ಬಗ್ಗೆ ಎಂದಾದರೂ ಜೀವನಚರಿತ್ರೆ ಬಂದರೆ, ಕಳೆದ ಏಳು ತಿಂಗಳು ಎಲ್ಲ ಪ್ರತಿಕೂಲಗಳ ವಿರುದ್ಧ ಹೇಗೆ ಹೋರಾಡಬೇಕು, ಶಾಂತವಾಗಿರಬೇಕು, ನಿಮ್ಮ ಸಾಮರ್ಥ್ಯಗಳನ್ನು ನಂಬಬೇಕು ಮತ್ತು ಪುನರಾಗಮನ ಮಾಡಬೇಕು ಎಂಬುದಕ್ಕೆ ಎಲ್ಲ ಆಟಗಾರರಿಗೆ ಒಂದು ಉದಾಹರಣೆಯಾಗಿರಬೇಕು' ಎಂದು ಹೇಳಿದರು.
Advertisement