
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 18ನೇ ಆವೃತ್ತಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಶನಿವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ರಜತ್ ಪಾಟೀದಾರ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎದುರಿಸಲಿದೆ. ಪಂದ್ಯ ಆರಂಭಕ್ಕೆ ಕೇವಲ ಒಂದು ದಿನ ಬಾಕಿ ಉಳಿದಿದ್ದು, ಕೋಲ್ಕತ್ತಾದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಈ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದ್ದು, ಉದ್ಘಾಟನಾ ಪಂದ್ಯ ಸಂಪೂರ್ಣವಾಗಿ ರದ್ದಾಗುವ ಸಾಧ್ಯತೆ ಇದೆ.
ಭಾರತೀಯ ಹವಾಮಾನ ಇಲಾಖೆ (IMD) ಗುರುವಾರದಿಂದ ಭಾನುವಾರದವರೆಗೆ ದಕ್ಷಿಣ ಬಂಗಾಳದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಮಾರ್ಚ್ 22 ರ ಆರ್‌ಸಿಬಿ ಮತ್ತು ಕೆಕೆಆರ್ ಪಂದ್ಯ ನಡೆಯುವ ದಿನದಂದು, ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಭಾನುವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಅಕ್ಯೂವೆದರ್ ಪ್ರಕಾರ, ಶನಿವಾರ ಕೋಲ್ಕತ್ತಾದಲ್ಲಿ ಮಳೆಯಾಗುವ ಸಾಧ್ಯತೆ ಶೇ 74 ರಷ್ಟಿದ್ದು, ಮೋಡ ಕವಿದ ವಾತಾವರಣ ಶೇ 97 ರಷ್ಟಿದೆ. ಸಂಜೆ ಮಳೆಯಾಗುವ ಸಾಧ್ಯತೆ ಶೇ 90 ರಷ್ಟಿದೆ. ಹೀಗಾಗಿ, ಐಪಿಎಲ್ 18ನೇ ಆವೃತ್ತಿಯ ಆರಂಭಿಕ ದಿನದಂದು ಈಡನ್ ಗಾರ್ಡನ್ಸ್‌ನಲ್ಲಿ ಸಾಕಷ್ಟು ಮಳೆಯಾಗುತ್ತದೆ ಎಂಬುದು ಬಹುತೇಕ ಖಚಿತವಾಗಿದೆ. ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳು ಆಡುವುದು ಬಹುತೇಕ ಅನುಮಾನವಾಗಿದೆ.
ಈಡನ್ ಗಾರ್ಡನ್ಸ್‌ನಲ್ಲಿ ನಡೆಯಬೇಕಿದ್ದ ಒಂದು ಪಂದ್ಯವನ್ನು ಈಗಾಗಲೇ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಏಪ್ರಿಲ್ 6 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯವನ್ನು ಗುವಾಹಟಿಗೆ ಸ್ಥಳಾಂತರಿಸಲಾಗಿದೆ. ಆ ದಿನ ನಗರದಲ್ಲಿ 'ರಾಮ ನವಮಿ' ಆಚರಣೆ ಇರುವುದರಿಂದ ಐಪಿಎಲ್ ಪಂದ್ಯಕ್ಕೆ ಭದ್ರತೆ ಒದಗಿಸಲು ಕಷ್ಟಸಾಧ್ಯವಾಗುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಬಿ ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಪಿಟಿಐಗೆ ತಿಳಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಘರ್ಷಣೆಗೆ ಸಾವಿರಾರು ಪ್ರೇಕ್ಷಕರು ಸಾಕ್ಷಿಯಾಗುವ ನಿರೀಕ್ಷೆಯಿತ್ತು. ಆದರೆ, ಅಭಿಮಾನಿಗಳ ಈ ಆಸೆಗೆ ಮಳೆರಾಯ ತಣ್ಣೀರೆರೆಚುವ ಎಲ್ಲ ಸಾಧ್ಯತೆ ಇದೆ.
Advertisement