
2018ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿದ್ದ ವೇಗಿ ಮೊಹಮ್ಮದ್ ಸಿರಾಜ್ ಅವರು ಈ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಬಿಕರಿಯಾಗಿದ್ದಾರೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಸಿರಾಜ್ ಅವರನ್ನು ತಂಡದಿಂದ ಕೈಬಿಟ್ಟಿತ್ತು. ಬಳಿಕ ನಡೆದ ಹರಾಜಿನಲ್ಲಿ ಜಿಟಿ ಸಿರಾಜ್ ಅವರನ್ನು ಖರೀದಿಸಿತ್ತು. ಆದರೆ, ಸಿರಾಜ್ ಅವರಿಗೆ ಆರ್‌ಸಿಬಿ ಅಂದರೆ ಎಮೋಷನ್.
2018 ಮತ್ತು 2019ರ ಸಂಕಷ್ಟದ ಸಮಯದಲ್ಲಿ ವಿರಾಟ್ ಕೊಹ್ಲಿ ತುಂಬು ಹೃದಯದಿಂದ ಬೆಂಬಲ ನೀಡಿದ್ದರು. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬಿಟ್ಟು ಗುಜರಾತ್ ಟೈಟಾನ್ಸ್‌ಗೆ ಸೇರಿದ್ದು ನನಗೆ ಭಾವನಾತ್ಮಕ ಸನ್ನಿವೇಶವಾಗಿತ್ತು ಎಂದು ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಒಪ್ಪಿಕೊಂಡಿದ್ದಾರೆ.
ಕಳೆದ ಆರು ವರ್ಷಗಳಿಂದ ಬೆಂಗಳೂರಿನ ವೇಗದ ದಾಳಿಯ ನಿರ್ಣಾಯಕ ಭಾಗವಾಗಿದ್ದ ಸಿರಾಜ್, ಈಗ ತನ್ನ ಹಿಂದಿನ ತಂಡ ಮತ್ತು ಅದರ ಮಾಂತ್ರಿಕ ಕೊಹ್ಲಿ ಅವರ ಬಗ್ಗೆ ತಮ್ಮ ಮನದಲ್ಲಿ ಆಳವಾಗಿ ಬೇರೂರಿರುವ ಭಾವನೆಗಳನ್ನು ಹೊತ್ತುಕೊಂಡು ಹೊಸ ತಂಡಕ್ಕೆ ಹೊಂದಿಕೊಳ್ಳುವ ಸವಾಲನ್ನು ಎದುರಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಸಮಯವನ್ನು ನೆನಪಿಸಿಕೊಳ್ಳುತ್ತಾ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಸಂಕಷ್ಟದ ಸಂದರ್ಭಗಳಲ್ಲಿ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸುವಲ್ಲಿ ವಹಿಸಿದ ನಿರ್ಣಾಯಕ ಪಾತ್ರದ ಬಗ್ಗೆ ಸಿರಾಜ್ ಮಾತನಾಡಿದ್ದಾರೆ.
'ನಿಜ ಹೇಳಬೇಕೆಂದರೆ, ವಿರಾಟ್ ಕೊಹ್ಲಿ ನನ್ನ ವೃತ್ತಿಜೀವನದಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. 2018 ಮತ್ತು 2019 ರಲ್ಲಿ ನನ್ನ ಕೆಟ್ಟ ಸಮಯದಲ್ಲಿ ಅವರು ನನ್ನನ್ನು ಬೆಂಬಲಿಸಿದರು. ನನ್ನನ್ನು ಉಳಿಸಿಕೊಂಡರು ಮತ್ತು ಅದರ ನಂತರ, ನನ್ನ ಪ್ರದರ್ಶನ ಮತ್ತು ಗ್ರಾಫ್ ಏರಿತು' ಎಂದು ಸಿರಾಜ್ ANI ಜೊತೆ ಮಾತನಾಡುತ್ತಾ ಹೇಳಿದ್ದಾರೆ.
'ಅವರು ತುಂಬಾ ಬೆಂಬಲ ನೀಡಿದ್ದಾರೆ. ಆರ್‌ಸಿಬಿಯನ್ನು ತೊರೆಯುವುದು ನನಗೆ ತುಂಬಾ ಭಾವನಾತ್ಮಕ ವಿಚಾರವಾಗಿದೆ. ನಾನು ಆರ್‌ಸಿಬಿ ವಿರುದ್ಧ ಆಡುವಾಗ ಏನಾಗುತ್ತದೆ ಎಂದು ನೋಡೋಣ. ಏಪ್ರಿಲ್ 2 ರಂದು ಪಂದ್ಯವಿದೆ' ಎಂದು ಸಿರಾಜ್ ಹೇಳಿದರು.
ಆರ್‌ಸಿಬಿ ಪರ ಮೂರನೇ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಭಾರತದ ಸ್ಟಾರ್ ವೇಗಿ ಇದೀಗ ಬೆಂಗಳೂರು ತಂಡದಿಂದ ನಿರ್ಗಮಿಸಿದ್ದಾರೆ. ಸಿರಾಜ್ ತಾವು ಆಡಿರುವ 87 ಪಂದ್ಯಗಳಲ್ಲಿ, 83 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಗುಜರಾತ್ ಜೊತೆ ತರಬೇತಿ ಪಡೆಯುತ್ತಿರುವ ಸಿರಾಜ್, 'ನನ್ನ ತಂಡದ ಎಲ್ಲ ವೇಗಿಗಳೊಂದಿಗೆ ನನ್ನ ತರಬೇತಿ ತುಂಬಾ ಚೆನ್ನಾಗಿ ನಡೆಯುತ್ತಿದೆ ಮತ್ತು ನಮ್ಮ ಬೌಲಿಂಗ್ ಘಟಕವು ಹೇಗೆ ಯೋಜಿಸಬೇಕು ಮತ್ತು ಕಾರ್ಯಗತಗೊಳಿಸಬೇಕು ಎಂದು ತಿಳಿದಿದೆ. ತಂಡದ ಸದಸ್ಯರೊಂದಿಗೆ ಮತ್ತು ವಿಶೇಷವಾಗಿ ಗುಜರಾತ್ ಟೈಟಾನ್ಸ್‌ನಲ್ಲಿರುವುದರಿಂದ ನನಗೆ ತುಂಬಾ ಆಹ್ಲಾದಕರವಾದ ತರಬೇತಿ ಅನಿಸುತ್ತಿದೆ' ಎಂದು ಹೇಳಿದರು.
Advertisement