
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕ್ರಿಕೆಟ್ ವಿವಾದಗಳು ಕಡಿಮೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ.. ನಿತ್ಯ ಒಂದಿಲ್ಲೊಂದು ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ ಸುದ್ದಿಗೆ ಗ್ರಾಸವಾಗುತ್ತಿದೆ.
ಈ ಬಾರಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ಪತ್ನಿ ಹಾಗೂ ನಟಿ, ನಿರೂಪಕಿ ಸನಾ ಜಾವೆದ್ ತಮ್ಮ ಮಾತುಗಳ ಮೂಲಕ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದಾರೆ. ಪಾಕಿಸ್ತಾನ ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ಹಿನ್ನಲೆಯಲ್ಲಿ ಖಾಸಗಿ ಚಾನೆಲ್ ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸನಾ ಜಾವೆದ್ ಅದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಾಕ್ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಜೊತೆ ಸಂಘರ್ಷಕ್ಕೆ ಇಳಿದಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಕಾರ್ಯಕ್ರಮದಲ್ಲಿ ಪಾಕಿಸ್ತಾನ ತಂಡದ ಕುರಿತು ಚರ್ಚೆ ನಡೆಯುತ್ತಿತ್ತು. ಸನಾ ಇತ್ತೀಚೆಗೆ 'ಜೀತೋ ಪಾಕಿಸ್ತಾನ' ಎಂಬ ಟಿವಿ ಗೇಮ್ ಶೋನಲ್ಲಿ ಸರ್ಫರಾಜ್ ಜೊತೆಗೆ ಕಾಣಿಸಿಕೊಂಡಿದ್ದರು. ಈ ವೇಳೆ ನಡೆಯುತ್ತಿದ್ದ ಮಾತುಕತೆ ವೇಳೆ 'ಮಧ್ಯಮ ವೇಗಿಗಳನ್ನು ಎದುರಿಸಲು ತಾನು ಇಷ್ಟಪಡುತ್ತೇನೆ' ಎಂದು ಸರ್ಫರಾಜ್ ಹೇಳಿದರು. ಈ ವೇಳೆ ಸರ್ಫರಾಜ್ ಹೇಳಿಕೆಗೆ ವ್ಯಂಗ್ಯ ಮಾಡಿದ ಸನಾ ಜಾವೆದ್, 'ಯಾರೋ ನಿಮ್ಮನ್ನು ಆಟಿಕೆಯಂತೆ ಗಾಯಗೊಳಿಸಿದಂತೆ ನೀವು ಮಾತನಾಡುತ್ತಿದ್ದೀರಿ" ಎಂದು ಹೇಳಿದರು.
ಇದಕ್ಕೆ ಸರ್ಫರಾಜ್ ಪ್ರತಿಕ್ರಿಯಿಸಿ: "ನಾನು ಎಲ್ಲಿ ಆಡಬೇಕೋ ಅಲ್ಲಿ ಆಡಿದ್ದೇನೆ. ಆದರೆ ಕೆಲವರು ಎಲ್ಲಿ ಆಡಬೇಕೋ ಅಲ್ಲಿ ಅಡದೇ ನಮ್ಮನ್ನು ಟೀಕಿಸುತ್ತಾರೆ ಎಂದು ವ್ಯಂಗ್ಯ ಮಾಡಿದರು. ಇದಕ್ಕೆ ಕೊಂಚ ಗರಂ ಆದಂತೆ ಕಂಡುಬಂದ ಶೊಯೆಬ್ ಮಲ್ಲಿಕ್ ಪತ್ನಿ ಸನಾ ಜಾವೆದ್, "ಆಪ್ ಕೋ ಕ್ಯಾ ತಕ್ಲೀಫ್ ಹೈ, ಮೇ ಅಪ್ನೇ ಮಿಯಾಂ ಕೆ ಸಾಥ್ ಜೈಸೆ ಭಿ ಖೇಲುನ್ (ನಾನು ನನ್ನ ಪತಿಯೊಂದಿಗೆ ಹೇಗೆ ಬೇಕಾದರೂ ಆಟ ಆಡುತ್ತೇನೆ. ನಿಮಗೇನು ಕಷ್ಟ)" ಎಂದು ಪ್ರಶ್ನಿಸಿದ್ದಾರೆ.
ಅವರ ಈ ಹೇಳಿಕೆಗಳೇ ಇದೀಗ ಪಾಕಿಸ್ತಾನದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಸನಾ ಜಾವೆದ್ ಅವರ ಹೇಳಿಕೆಗಳನ್ನು ಪಾಕ್ ಕ್ರಿಕೆಟ್ ಅಭಿಮಾನಿಗಳು ಅಗೌರವವೆಂದು ಪರಿಗಣಿಸಿ ಟೀಕಿಸುತ್ತಿದ್ದಾರೆ. 2017 ರ ಚಾಂಪಿಯನ್ಸ್ ಟ್ರೋಫಿ ವಿಜೇತ ಪಾಕಿಸ್ತಾನದ ನಾಯಕನನ್ನು ಅಗೌರವಿಸಿದ್ದಕ್ಕಾಗಿ ಅಭಿಮಾನಿಗಳು ಸನಾ ಅವರನ್ನು ಟೀಕಿಸಿದ್ದು ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಾನಿಯಾ ಮಿರ್ಜಾಗೆ ಕೈಕೊಟ್ಟು, ಪಾಕ್ ನಟಿ ಸನಾ ಜಾವೆದ್ ವಿವಾಹವಾದ ಕ್ರಿಕೆಟಿಗ ಶೊಯೆಬ್ ಮಲ್ಲಿಕ್
ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾಗೆ 'ತಲ್ಲಾಖ್' ನೀಡಿದ್ದ ಪಾಕಿಸ್ತಾನಿ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ನಟಿ ಸನಾ ಜಾವೆದ್ ರನ್ನು ವಿವಾಹವಾಗಿದ್ದರು. ಸನಾ ಮತ್ತು ಶೊಯೆಬ್ ಮೂರು ವರ್ಷಗಳ ಕಾಲ ಸಂಬಂಧದಲ್ಲಿದ್ದರು. 2024ರ ಜನವರಿಯಲ್ಲಿ ಈ ಜೋಡಿ ವಿವಾಹವಾಗಿತ್ತು. ಸನಾ ಜಾವೆದ್ ಗೂ ಇದು 2ನೇ ಮದುವೆಯಾಗಿದ್ದು, ಅವರು ಉಮೈರ್ ಜಸ್ವಾಲ್ ಅವರನ್ನು ಮದುವೆಯಾಗಿದ್ದರು.
Advertisement