
2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯು ಶನಿವಾರ (ಮಾ. 22) ಆರಂಭವಾಗಲಿದ್ದು, ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿವೆ. ಈ ಆವೃತ್ತಿಯ ಉದ್ಘಾಟನಾ ಪಂದ್ಯವು ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ವಿಶೇಷ ಪಂದ್ಯವಾಗಲಿದೆ. ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಪಂದ್ಯವು ವಿರಾಟ್ ಕೊಹ್ಲಿ ಅವರ 400ನೇ ಟಿ20 ಪಂದ್ಯವಾಗಿದ್ದು, ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ನಂತರ 400 ಟಿ20 ಪಂದ್ಯಗಳನ್ನು ಆಡಿದ ಮೂರನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ವಿರಾಟ್ ಕೊಹ್ಲಿ ಸದ್ಯ 399 ಟಿ20 ಪಂದ್ಯಗಳನ್ನು ಆಡಿದ್ದಾರೆ. ಕೆಕೆಆರ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಬಳಿಕ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ಕ್ರಿಕೆಟಿಗೆ ಎನ್ನುವ ದಾಖಲೆ ಮಾಡಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ 448 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ, ಕಳೆದ ವರ್ಷ ಐಪಿಎಲ್‌ನಿಂದ ನಿವೃತ್ತರಾದ ದಿನೇಶ್ ಕಾರ್ತಿಕ್ ಇಲ್ಲಿಯವರೆಗೆ 412 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಅತಿಹೆಚ್ಚು ಟಿ20 ಪಂದ್ಯಗಳನ್ನು ಆಡಿರುವ ಭಾರತೀಯರು
ರೋಹಿತ್ ಶರ್ಮಾ - 448
ದಿನೇಶ್ ಕಾರ್ತಿಕ್ - 412
ವಿರಾಟ್ ಕೊಹ್ಲಿ - 399
ಎಂಎಸ್ ಧೋನಿ - 391
ಸುರೇಶ್ ರೈನಾ - 336
ಶಿಖರ್ ಧವನ್ - 334
ರವೀಂದ್ರ ಜಡೇಜಾ - 332
ರವಿಚಂದ್ರನ್ ಅಶ್ವಿನ್ - 324
ಯುಜ್ವೇಂದ್ರ ಚಾಹಲ್ - 312
ಸೂರ್ಯ ಕುಮಾರ್ ಯಾದವ್ - 309
ಮತ್ತೊಂದೆಡೆ, ವಿರಾಟ್ ಕೊಹ್ಲಿ ಆಡಿರುವ 399 ಪಂದ್ಯಗಳಲ್ಲಿ ಒಂಬತ್ತು ಶತಕಗಳು ಮತ್ತು 97 ಅರ್ಧಶತಕಗಳ ಸಹಾಯದಿಂದ 12,886 ರನ್ ಗಳಿಸಿದ್ದಾರೆ.
ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಮತ್ತು ಸದ್ಯ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕೋಚ್ ಕೀರನ್ ಪೊಲಾರ್ಡ್ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ದಾಖಲೆ ಹೊಂದಿದ್ದಾರೆ. 2006ರಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರ, ಪೊಲಾರ್ಡ್ 695 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ, ಪೊಲಾರ್ಡ್ ನಂತರ ಡ್ವೇನ್ ಬ್ರಾವೋ (582), ಶೋಯೆಬ್ ಮಲಿಕ್ (552), ಆಂಡ್ರೆ ರಸೆಲ್ (538), ಸುನೀಲ್ ನರೈನ್ (536), ಡೇವಿಡ್ ಮಿಲ್ಲರ್ (519), ಅಲೆಕ್ಸ್ ಹೇಲ್ಸ್ (494), ರವಿ ಬೋಪಾರ (478), ಕ್ರಿಸ್ ಗೇಲ್ (463), ರಶೀದ್ ಖಾನ್ (462), ಗ್ಲೆನ್ ಮ್ಯಾಕ್ಸ್‌ವೆಲ್ (459) ಮತ್ತು ರೋಹಿತ್ ಶರ್ಮಾ (448) ಇದ್ದಾರೆ.
ತಮ್ಮ 400ನೇ ಟಿ20 ಪಂದ್ಯದಲ್ಲಿ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 13,000 ರನ್‌ಗಳನ್ನು ಪೂರೈಸುವ ದಾಖಲೆ ಕೂಡ ಮಾಡುವ ಅವಕಾಶವಿದೆ. ಐಪಿಎಲ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿರುವ ಕೊಹ್ಲಿ ಈ ಸಾಧನೆ ಮಾಡಲು ಐಪಿಎಲ್ 2025ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ 114 ರನ್‌ಗಳ ಅಗತ್ಯವಿದೆ.
Advertisement