
ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಪಡೆದಿರುವ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿದು ಸುಮಾರು ಆರು ವರ್ಷ ಕಳೆದಿವೆ. ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದ ಅವರು ನಿವೃತ್ತಿ ಪಡೆದಿಲ್ಲ. ಕಳೆದ ವರ್ಷ ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅವರನ್ನು ಉಳಿಸಿಕೊಂಡಿತ್ತು. ಧೋನಿಗೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೆ. 43 ವರ್ಷ ವಯಸ್ಸಿನಲ್ಲಿ, ಅವರು ಮೊದಲ ಬಾರಿಗೆ 'ಅನ್‌ಕ್ಯಾಪ್ಡ್ ಪ್ಲೇಯರ್' ಆಗಿ ಐಪಿಎಲ್ 2025ರಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಂತಕಥೆ ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ನಿವೃತ್ತಿ ಹೊಂದುವ ಬಗ್ಗೆ ಮೌನ ಮುರಿದಿದ್ದಾರೆ. ಐಪಿಎಲ್ 2025ನೇ ಆವೃತ್ತಿಯಲ್ಲಿ ಸಿಎಸ್‌ಕೆ ತಂಡದ ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧದ ಆರಂಭಿಕ ಪಂದ್ಯಕ್ಕೂ ಮುನ್ನ, ಇದು ನನ್ನ ಫ್ರಾಂಚೈಸಿ ಎಂದು ಹೇಳಿದ್ದಾರೆ.
'ನಾನು ಸಿಎಸ್‌ಕೆ ಪರ ಎಷ್ಟು ಕಾಲ ಬೇಕಾದರೂ ಆಡಬಲ್ಲೆ. ಇದು ನನ್ನ ಫ್ರಾಂಚೈಸಿ. ನಾನು ವ್ಹೀಲ್‌ಚೇರ್‌ನಲ್ಲಿದ್ದರೂ ಸಹ, ಅದು ನನ್ನನ್ನು ಎಳೆದುಕೊಂಡು ಹೋಗುತ್ತದೆ' ಎಂದು ಧೋನಿ ಜಿಯೋಹಾಟ್‌ಸ್ಟಾರ್‌ನಲ್ಲಿ ಹೇಳಿದರು.
2019 ರಿಂದ ಪ್ರತಿ ಬಾರಿಯೂ ಪಂದ್ಯಾವಳಿ ನಡೆಯುವಾಗಲೂ ಮಾಜಿ ಭಾರತ ತಂಡದ ನಾಯಕ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಊಹಾಪೋಹಗಳು ವೇಗ ಪಡೆದುಕೊಳ್ಳುತ್ತವೆ. ಆದರೆ, ಪದೇ ಪದೆ, ಧೋನಿ ಸಿಎಸ್‌ಕೆ ಪರವಾಗಿ ಕಣಕ್ಕಿಳಿದಿದ್ದಾರೆ. ಅವರಿನ್ನೂ ನಿವೃತ್ತಿ ಹೊಂದುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ತೋರಿಸಿದ್ದಾರೆ.
CSK vs MI ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ರುತುರಾಜ್ ಗಾಯಕ್ವಾಡ್, 'ನೀವು ಈಗ ನೋಡಿದರೆ ಸಚಿನ್ ತೆಂಡೂಲ್ಕರ್ ಕೂಡ 50ನೇ ವಯಸ್ಸಿನಲ್ಲಿಯೂ ಸಹ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹಾಗಾಗಿ, ಇನ್ನೂ ಹಲವು ವರ್ಷಗಳು ಬಾಕಿ ಇವೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.
Advertisement