
ಭಾನುವಾರ ಚೆಪಾಕ್‌ನಲ್ಲಿ ನಡೆದ ಐಪಿಎಲ್ 2025ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ. ವೇಗಿ ದೀಪಕ್ ಚಾಹರ್ ಮುಂಬೈ ಪರ ತಮ್ಮ ಮೊದಲ ಪಂದ್ಯ ಆಡಿದ್ದಾರೆ. ದೀಪಕ್ ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದರು.
ಮುಂಬೈ ನೀಡಿದ 156 ರನ್‌ಗಳ ಗುರಿ ಬೆನ್ನಟ್ಟಿದ ಸಿಎಸ್‌ಕೆ, ನಾಯಕ ರುತುರಾಜ್ ಗಾಯಕ್ವಾಡ್ (53) ಮತ್ತು ರಾಚಿನ್ ರವೀಂದ್ರ (65*) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಐದು ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ಐಪಿಎಲ್ ವೃತ್ತಿಜೀವನದ ಕೊನೆಯ ಏಳು ವರ್ಷಗಳನ್ನು ಸಿಎಸ್‌ಕೆ ಜೊತೆ ಕಳೆದ ಚಾಹರ್, ಮುಂಬೈ ಪರವಾಗಿ ಒಂದು ವಿಕೆಟ್ ಕಬಳಿಸಿದ್ದು ಮಾತ್ರವಲ್ಲದೆ, 15 ಎಸೆತಗಳಲ್ಲಿ 28 ರನ್ ಗಳಿಸಿದರು.
ಚಾಹರ್ ಅವರ ಸಹೋದರಿ ಮಾಲ್ತಿ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಮೀಮ್ ಅನ್ನು ಹಂಚಿಕೊಂಡಿದ್ದಾರೆ. ತಮ್ಮ ಹಳೆಯ ತಂಡದ ವಿರುದ್ಧ ಆಡಿದ್ದಕ್ಕಾಗಿ ಮಾಲ್ತಿ ತನ್ನ ಸಹೋದರನನ್ನು ಟ್ರೋಲ್ ಮಾಡಿದ್ದಾರೆ ಮತ್ತು ಈ ಪರಿಸ್ಥಿತಿಯನ್ನು ತೆಲುಗು ಬ್ಲಾಕ್‌ಬಸ್ಟರ್ 'ಬಾಹುಬಲಿ'ಗೆ ಹೋಲಿಸಿದ್ದಾರೆ. ಚಿತ್ರದಲ್ಲಿ ಬಾಹುಬಲಿಗೆ ಆತನ ಚಿಕ್ಕಪ್ಪ ಕಟ್ಟಪ್ಪನೇ ಇರಿಯುವ ದೃಶ್ಯವನ್ನು ಒಳಗೊಂಡಿದೆ.
ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ, ಮಾಲ್ತಿ ಚಾಹರ್ ಅವರು ಮೈದಾನದಲ್ಲಿ ಆಡಿದ ಕ್ಷಣ ಮತ್ತು 'ಬಾಹುಬಲಿ' ಚಿತ್ರದ ಬೆನ್ನಿಗೆ ಇರಿದ ದೃಶ್ಯವನ್ನು ಒಳಗೊಂಡಿರುವ ಕೊಲಾಜ್ ಅನ್ನು ಪೋಸ್ಟ್ ಮಾಡಿದ್ದಾರೆ.
ನೂರ್ ಅಹ್ಮದ್ ಅವರು 18 ರನ್ ನೀಡಿದ ನಾಲ್ಕು ವಿಕೆಟ್ ಕಬಳಿಸಿದ್ದು ಮತ್ತು ಖಲೀಲ್ ಅಹ್ಮದ್ ಅವರು 29 ರನ್ ನೀಡಿ ಮೂರು ವಿಕೆಟ್ ಪಡೆದಿದ್ದು ಸಿಎಸ್‌ಕೆಯು ಮುಂಬೈ ತಂಡವನ್ನು 9 ವಿಕೆಟ್ ನಷ್ಟಕ್ಕೆ 155 ರನ್‌ಗಳಿಗೆ ಕಟ್ಟಿಹಾಕಲು ನೆರವಾಯಿತು. ನಂತರ ರುತುರಾಜ್ ಗಾಯಕ್ವಾಡ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರು ಬೌಂಡರಿ ಮತ್ತು ಮೂರು ಸಿಕ್ಸರ್ ಸಿಡಿಸಿ 22 ಎಸೆತಗಳಲ್ಲಿಯೇ ಅರ್ಧಶತಕ ಗಳಿಸಿದರು. ಇದು ಪಂದ್ಯಾವಳಿಯಲ್ಲಿ ಅವರ ಅತ್ಯಂತ ವೇಗದ ಅರ್ಧಶತಕವಾಗಿದೆ.
2012ನೇ ಆವೃತ್ತಿಯಿಂದಲೂ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ, ಚೊಚ್ಚಲ ಆಟಗಾರ ವಿಘ್ನೇಶ್ ಪುತ್ತೂರ್ ಅವರ ಸ್ಪೆಲ್ ಅತಿದೊಡ್ಡ ಸಕಾರಾತ್ಮಕ ಅಂಶವಾಗಿದೆ.
Advertisement