
ವಿಶಾಖಪಟ್ಟಣಂ: ಐಪಿಎಲ್ ಟೂರ್ನಿ ಇಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಬ್ ಪಂತ್ (Rishabh Pant) ತೀವ್ರ ಮುಜುಗರ ಅನುಭವಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 6 ಎಸೆತ ಎದುರಿಸಿ ಶೂನ್ಯಕ್ಕೆ ಔಟಾಗಿದ್ದಾರೆ.
ಆಂಧ್ರ ಪ್ರೇದಶದ ವಿಶಾಖಪಟ್ಟಣಂನ ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಮಿಚೆಲ್ ಮಾರ್ಶ್ (72 ರನ್) ಮತ್ತು ನಿಕೋಲಸ್ ಪೂರನ್ (75 ರನ್) ಅವರ ಅರ್ಧಶತಕಗಳ ನೆರವಿನಿಂದ ಡೆಲ್ಲಿ ವಿರುದ್ಧ 209 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಪಡೆಯುವ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಮೊದಲ ವಿಕೆಟ್ ಗೆ 46 ರನ್ ಗಳಿಸಿತು. ಈ ಹಂತದಲ್ಲಿ ಮರ್ಕ್ರಾಮ್ 15ರನ್ ಗಳಿಸಿ ಔಟಾದರು.
ಬಳಿಕ ಕ್ರೀಸ್ ಗೆ ಬಂದ ನಿಕೋಲಸ್ ಪೂರನ್ ಮೆಚೆಲ್ ಮಾರ್ಶ್ ಜೊತೆಗೂಡಿ ಅಕ್ಷರಶಃ ಡೆಲ್ಲಿ ಬೌಲರ್ ಗಳ ಮೇಲೆ ಆರ್ಭಟ ನಡೆಸಿದರು. 2ನೇ ವಿಕೆಟ್ ಗೆ ಈ ಜೋಡಿ 87 ರನ್ ಗಳ ಅಮೋಘ ಜೊತೆಯಾಟವಾಡಿತು. 36 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 6 ಬೌಂಡರಿ ನೆರವಿನಿಂದ ಮಾರ್ಶ್ 72 ರನ್ ಗಳಿಸಿ ಔಟಾದರು.
6 ಎಸೆತಕ್ಕೆ ಪಂತ್ ಡಕೌಟ್
ಇನ್ನು ಮಾರ್ಶ್ ಔಟಾದ ಬಳಿಕ ಕ್ರೀಸ್ ಗೆ ಬಂದ ಎಲ್ ಎಸ್ ಜಿ ನಾಯಕ ರಿಷಬ್ ಪಂತ್ ಖಾತೆ ತೆರೆಯುವ ಮುನ್ನವೇ ಅಭಿಮಾನಿಗಳಿಗೆ ತೀವ್ರ ನಿರಾಶೆ ಮೂಡಿಸಿದರು. 6 ಎಸೆತ ಎದುರಿಸಿದ ಪಂತ್ ಶೂನ್ಯ ಸುತ್ತಿ ಕುಲದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದರು. ಇದು ಲಕ್ನೋ ತಂಡದ ನಾಯಕನಿಗೆ ತೀವ್ರ ಮುಜುಗರಕ್ಕೆ ಕಾರಣವಾಯಿತು.
ಈ ಟೂರ್ನಿಗೂ ಮೊದಲು ಐಪಿಎಲ್ ಆಟಗಾರರ ಹರಾಜಿನಲ್ಲಿ ಬರೊಬ್ಬರಿ 27 ಕೋಟಿ ರೂ ಗೆ ಬಿಕರಿಯಾಗಿದ್ದರು. ಕೆಎಲ್ ರಾಹುಲ್ ರನ್ನು ಕೈ ಬಿಟ್ಟಿದ್ದ ಲಕ್ನೋ ತಂಡ ರಿಷಬ್ ಪಂತ್ ರನ್ನು 27 ಕೋಟಿ ರೂ ಗಳಿಗೆ ಖರೀದಿ ಮಾಡಿ ನಾಯಕನ ಜವಾಬ್ದಾರಿ ಕೂಡ ನೀಡಿತ್ತು.
ಲಕ್ನೋ ಬೃಹತ್ ಮೊತ್ತ
ಇನ್ನು ಪಂತ್ ಔಟಾದ ಬಳಿಕ ಕ್ರೀಸ್ ಗೆ ಬಂದ ನಿಕೋಲಸ್ ಪೂರನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. 30 ಎಸೆತಗಳನ್ನು ಎದುರಿಸಿದ ಪೂರನ್ 7 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 75 ರನ್ ಚಚ್ಚಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ಔಟಾದರು.
ಬಳಿಕ ಅಂತಿಮ ಹಂತದಲ್ಲಿ ಡೇವಿಡ್ ಮಿಲ್ಲರ್ 19 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ ನೆರವಿನಿಂದ ಅಜೇಯ 27 ರನ್ ಗಳಿಸಿ ತಂಡದ ಮೊತ್ತ 200ರ ಗಡಿ ದಾಟುವಂತೆ ನೋಡಿಕೊಂಡರು. ಅಂತಿಮವಾಗಿ ಲಕ್ನೋ ತಂಡ ನಿಗಧಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ ಡೆಲ್ಲಿಗೆ ಗೆಲ್ಲಲು 210 ರನ್ ಗಳ ಗುರಿ ನೀಡಿದೆ.
ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ 3, ಕುಲದೀಪ್ ಯಾದವ್ 2 ಮತ್ತು ವಿಪ್ರಾಜ್ ನಿಗಮ್, ಮುಕೇಶ್ ಕುಮಾರ್ ತಲಾ 1 ವಿಕೆಟ್ ಪಡೆದರು.
Advertisement