
ಚೆನ್ನೈ: ಐಪಿಎಲ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲಿಸಿದ್ದು ಈ ಪಂದ್ಯದಲ್ಲಿ ಮುಂಬೈ ತಂಡದ ದೀಪಕ್ ಚಹರ್ ಗೆ ಚೆನ್ನೈ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟ್ ನಿಂದ ಬಾರಿಸಿದ ಘಟನೆ ನಡೆದಿದೆ.
ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 4 ವಿಕೆಟ್ ಗಳ ಅಂತರದಲ್ಲಿ ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 155ರನ್ ಕಲೆಹಾಕಿದರೆ, ಇದಕ್ಕೆ ಉತ್ತರವಾಗಿ ಚೆನ್ನೈ ತಂಡ 19.1 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ 4 ವಿಕೆಟ್ ಅಂತರದಲ್ಲಿ ಗೆಲುವು ಸಾಧಿಸಿತು.
ಅತಿ ವಿನಯಂ, ಬ್ಯಾಟ್ ದರ್ಶನಂ
ಇನ್ನು ಈ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಮುಂಬೈ ತಂಡದ ದೀಪಕ್ ಚಹರ್ ಮತ್ತು ಚೆನ್ನೈ ತಂಡದ ಎಂಎಸ್ ಧೋನಿ ಬಾಂಧವ್ಯ.. ಮೈದಾನದಲ್ಲಿ ಚಹರ್ ಧೋನಿ ಬ್ಯಾಟಿಂಗ್ ಗೆ ಬಂದಾಗ ಪದೇ ಪದೇ ಕೆಣಕುತ್ತಿದ್ದರು. ಧೋನಿ ಮುಂದೆಯೇ ಹೋಗಿ ಅವರನ್ನು ಸ್ಲೆಡ್ಜ್ ಮಾಡುತ್ತಿದ್ದರು.
ಈ ವೇಳೆ ಧೋನಿ ನಕ್ಕು ಸುಮ್ಮನಾಗುತ್ತಿದ್ದರು. ಆದರೆ ಪಂದ್ಯ ಮುಕ್ತಾಯದ ವೇಳೆ ಉಭಯ ತಂಡದ ಆಟಗಾರರು ಪರಸ್ಪರ ಹಸ್ತಲಾಘವ ಮಾಡುವಾಗ ಮಾತ್ರ ಧೋನಿ ದೀಪಕ್ ಚಹರ್ ಗೆ ತಮ್ಮ ಬ್ಯಾಟ್ ನಿಂದ ಹಿಂಬದಿಯಿಂದ ಬಾರಿಸಿದ್ದಾರೆ. ಈ ಹಾಸ್ಯಾತ್ಮಕ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಧೋನಿ ಜೊತೆಗಿನ ಚಹರ್ ಬಾಂಡಿಂಗ್ ಕುರಿತು ಚರ್ಚೆಯಾಗುತ್ತಿದೆ.
ಅಂದಹಾಗೆ ದೀಪಕ್ ಚಹರ್ ಈ ಹಿಂದೆ ಚೆನ್ನೈ ತಂಡದಲ್ಲೇ ಇದ್ದರು. ಆಗ ಧೋನಿ ಸಾರಥ್ಯದಲ್ಲಿ ಚಹರ್ ಸಿಎಸ್ ಕೆ ತಂಡದ ಪ್ರಮುಖ ಬೌಲರ್ ಆಗಿದ್ದರು. ಆದರೆ ಬಳಿಕ ಚಹರ್ ರನ್ನು ಚೆನ್ನೈ ಫ್ರಾಂಚೈಸಿ ಹಾರಾಜಿಗೆ ಬಿಟ್ಟಿತ್ತು. ಇದೀಗ ಚಹರ್ ಮುಂಬೈ ಪಾಲಾಗಿದ್ದು, ಧೋನಿ ಮತ್ತು ಚಹರ್ ಪರಸ್ಪರ ಎದುರಾಳಿಗಳಾಗಿ ಕಣಕ್ಕಿಳಿದಿದ್ದಾರೆ. ಅದಾಗ್ಯೂ ಅವರ ಸ್ನೇಹ ಹಾಗೆಯೇ ಇದೆ.
Advertisement