
ವಿಶಾಖಪಟ್ಟಣಂ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಸೋಲಿನ ಬಳಿಕ LSG ತಂಡದ ನಾಯಕ ರಿಷಬ್ ಪಂತ್ (Rishabh Pant) ಜೊತೆ ನಡೆಸಿದ ಚರ್ಚೆ ಕುರಿತಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕರಾದ ಸಂಜೀವ್ ಗೋಯೆಂಕಾ (Sanjiv Goenka) ಕೊನೆಗೂ ಮೌನ ಮುರಿದಿದ್ದಾರೆ.
ಇಡೀ ಕ್ರಿಕೆಟ್ ಅಭಿಮಾನಿಗಳನ್ನು ಕೆಲ ಕ್ಷಣಗಳ ಕಾಲ ತುದಿಗಾಲಲ್ಲಿ ನಿಲ್ಲಿಸಿದ್ದ LSG vs DC ಪಂದ್ಯದಲ್ಲಿ ಡೆಲ್ಲಿ ವಿರೋಚಿತ ಗೆಲುವು ಸಾಧಿಸಿತ್ತು. ಆದರೆ ಗೆಲ್ಲುವ ಪಂದ್ಯ ಕೈ ಚೆಲ್ಲುವ ಮೂಲಕ ಲಕ್ನೋ ಮಾಲೀಕರ ಕೆಂಗಣ್ಣಿಗೆ ಗುರಿಯಾಗಿತ್ತು.
ನಿನ್ನೆ ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸುಲಭ ಗೆಲುವು ಸಾಧಿಸುವ ಹಂತದಲ್ಲಿತ್ತು. ಆದರೆ ಅಶುತೋಷ್ ಶರ್ಮಾ ಮತ್ತು ವಿಪ್ರಜ್ ನಿಗಮ್ ತಮ್ಮ ವೀರಾವೇಶದ ಬ್ಯಾಟಿಂಗ್ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಎಲ್‌ಎಸ್‌ಜಿ ಗೆಲುವನ್ನು ಡೆಲ್ಲಿಯತ್ತ ವರ್ಗಾಯಿಸಿ 1 ವಿಕೆಟ್ ರೋಚಕ ಜಯ ಸಾಧಿಸಿದರು.
ಕ್ಲಿಷ್ಟ ಪರಿಸ್ಥಿತಿ ನಿಭಾಯಿಸಿದ ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್
65ಕ್ಕೆ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದ ಡೆಲ್ಲಿ ಗೆಲುವಿಗೆ ಕೇವಲ 80 ಎಸೆತಗಳಲ್ಲಿ ಇನ್ನೂ 145 ರನ್ ಬೇಕಿತ್ತು. ಸಾಕಷ್ಟು ವಿಕೆಟ್ ಗಳು ಇಲ್ಲದ ಈ ಕ್ಲಿಷ್ಟ ಪರಿಸ್ಥಿತಿಯಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟು ತಂಡವನ್ನು ಒಂದು ಹಂತಕ್ಕೆ ತಂದಿಟ್ಟಿದ್ದು ಟ್ರಿಸ್ಟಾನ್ ಸ್ಟಬ್ಸ್.
ಬಳಿಕ ಅದನ್ನು ಅಶುತೋಷ್ಮತ್ತು ವಿಪ್ರಜ್ ಮುಂದುವರೆಸಿದರು. 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ವಿಪ್ರಜ್ ಅಮೋಘ 39 ರನ್ಗಳ ಕಾಣಿಕೆ ನೀಡಿದರೆ, 7 ಕ್ರಮಾಂಕದಲ್ಲಿ ಆಡಿದ ಅಶುತೋಷ್ 31 ಬಾಲ್ಗಳಲ್ಲಿ ಅಜೇಯ 66 ರನ್ ಸಿಡಿಸಿ ಮಿಂಚಿನ ಪ್ರದರ್ಶನ ನೀಡಿ ಲಕ್ನೋ ಗೆಲುವನ್ನು ಕಸಿದುಕೊಂಡರು. ಒಂದು ವಿಕೆಟ್ನಿಂದ ಪಂದ್ಯ ಗೆಲ್ಲಿಸಿದರು.
ಗೋಯೆಂಕಾ ಚರ್ಚೆ, KL Rahul ಘಟನೆ ನೆನಪಿಸಿದ ಅಭಿಮಾನಿಗಳು
ಇನ್ನು ಈ ಪಂದ್ಯದ ಸೋಲಿನ ಬಳಿಕ ಮೈದಾನದಲ್ಲಿ ತಂಡದ ನಾಯಕ ರಿಷಬ್ ಪಂತ್ ಜೊತೆ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಗಂಭೀರ ಚರ್ಚೆ ನಡೆಸಿದ್ದರು. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಅಭಿಮಾನಿಗಳು ಕಳೆದ ಸೀಸನ್ ನ ಕೆಎಲ್ ರಾಹುಲ್ ಘಟನೆಯನ್ನು ಈ ಘಟನೆಗೆ ತಳುಕು ಹಾಕಿ ಫ್ರಾಂಚೈಸಿಯನ್ನು ಟೀಕಿಸುತ್ತಿದ್ದಾರೆ.
ಡ್ರೆಸ್ಸಿಂಗ್ ರೂಂಗೆ ಎಂಟ್ರಿ
ಪಂದ್ಯ ಮುಕ್ತಾಯಗೊಂಡ ನಂತರ ಗೋಯೆಂಕಾ ಅವರು ಲಕ್ನೋ ಸೂಪರ್ ಜೈಂಟ್ಸ್ ಡ್ರೆಸ್ಸಿಂಗ್ ರೂಮ್ಗೆ ಪ್ರವೇಶಿಸಿ, ಅಸಮಾಧಾನ ಹೊರಹಾಕುವುದರ ಜತೆಗೆ ಸಕಾರಾತ್ಮಕ ಅಂಶಗಳ ಕುರಿತೂ ಮಾತನಾಡಿದ್ದಾರೆ. ಮುಖದಲ್ಲಿ ನಗುವು ಇಲ್ಲದಿದ್ದರೂ ತಂಡಕ್ಕೆ ಬೆಂಬಲ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಫಲಿತಾಂಶ ನಿರಾಶಾದಾಯಕವಾಗಿದೆ ಎಂದು ಒಪ್ಪಿಕೊಂಡ ಗೋಯೆಂಕಾ, ಬೃಹತ್ ಮೊತ್ತವನ್ನು ರಕ್ಷಿಸಬಹುದಿತ್ತು ಎಂದು ಪರೋಕ್ಷವಾಗಿ ಗುಡುಗಿದ್ದಾರೆ. ಆದರೆ ಇದು ಆರಂಭಿಕ ಪಂದ್ಯವಷ್ಟೆ. ಟೂರ್ನಿ ಇನ್ನೂ ಬಹುದೂರ ಇದೆ ಎಂದರು. ಆಟಗಾರರು ಕೊನೆವರೆಗೂ ಹೋರಾಡಿದ್ದಕ್ಕೆ ಶ್ಲಾಘಿಸಿದ್ದಾರೆ.
LSG ಪೋಸ್ಟ್
ತಂಡದ ಮಾಲೀಕ ಸಂಜೀವ್ ಗೋಯೆಂಕಾ ಮತ್ತು ನಾಯಕ ರಿಷಬ್ ಪಂತ್ ಮಾತನಾಡುತ್ತಿರುವ ಫೋಟೋವನ್ನು ಹಂಚಿಕೊಂಡ,, ‘ವಿಶಾಖಪಟ್ಟಣದಲ್ಲಿ ನಡೆದ ಟೂರ್ನಿಯ ಮೊದಲ ಪಂದ್ಯದ ಬಳಿಕ ತಂಡದೊಂದಿಗೆ ಅಧ್ಯಕ್ಷ ಡಾ. ಸಂಜೀವ್ ಗೋಯೆಂಕಾ ಪ್ರೋತ್ಸಾಹದ ಮಾತುಗಳನ್ನು ಹಂಚಿಕೊಂಡರುʼ ಎಂದು ಎಲ್‌ಎಸ್‌ಜಿ ಪೋಸ್ಟ್ ಮಾಡಿದೆ.
ಸಂಜೀವ್ ಗೋಯೆಂಕಾ ಹೇಳಿದ್ದೇನು?
ಪಂದ್ಯದಿಂದ ಸಾಕಷ್ಟು ಸಕಾರಾತ್ಮಕ ಅಂಶಗಳನ್ನು ಸ್ವೀಕರಿಸುತ್ತೇನೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ನಾವು ಪವರ್ ಪ್ಲೇ ಹೊಂದಿದ್ದ ರೀತಿ ಅದ್ಭುತವಾಗಿತ್ತು. ಆಟ ಎಂದಮೇಲೆ ಇಂತಹ ಸಂಗತಿಗಳು ಸಂಭವಿಸುತ್ತವೆ. ನಮ್ಮದು ಯುವ ತಂಡ; ಪಾಸಿಟಿವ್ ಕಾಯ್ದುಕೊಳ್ಳೋಣ. ಮಾರ್ಚ್ 27ರವರೆಗೆ ಎದುರು ನೋಡೋಣ. ನಾವು ಉತ್ತಮ ಫಲಿತಾಂಶ ಪಡೆಯುತ್ತೇವೆ ಎಂದು ಆಶಿಸುತ್ತೇವೆ. ನಿರಾಶಾದಾಯಕ ಫಲಿತಾಂಶ (ಇಂದು ರಾತ್ರಿ), ಹೌದು. ಆದರೆ ಒಂದು ಅದ್ಭುತ ಆಟ. ತುಂಬಾ ಚೆನ್ನಾಗಿತ್ತು ಎಂದು ಗೋಯೆಂಕಾ ಹೇಳಿದ್ದಾರೆ. ನಂತರ ಗೋಯೆಂಕಾ ಅವರೊಂದಿಗೆ ಆಟಗಾರರು, ಸಿಬ್ಬಂದಿ ಚಪ್ಪಾಳೆ ತಟ್ಟಿದರು. ಆದರೆ ಮಾಲೀಕರ ಮುಖದಲ್ಲಿ ಸೋಲಿನ ನಿರಾಸೆ ಎದ್ದುಕಾಣುತ್ತಿತ್ತು.
ವಿವಾದದ ಬೆನ್ನಲ್ಲೇ ಗೋಯೆಂಕಾ ಸ್ಪಷ್ಟನೆ
ಇನ್ನು ಈ ಚರ್ಚೆ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿರುವಂತೆಯೇ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಂಜೀವ್ ಗೋಯೆಂಕಾ, "ಮೈದಾನದಲ್ಲಿ ತೀವ್ರತೆ, ಅದರಿಂದ ಹೊರಗೆ ಸೌಹಾರ್ದತೆ. ಮುಂದಿನದಕ್ಕಾಗಿ ಎದುರು ನೋಡುತ್ತಿದ್ದೇನೆ" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ತಂಡದ ಜೊತೆ ಯಾವುದೇ ರೀತಿಯ ಮನಸ್ತಾಪ ಇಲ್ಲ.. ಜಗಳ ಮಾಡಿಲ್ಲ ಎಂಬರ್ಥದಲ್ಲಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
Advertisement