
ಚೆನ್ನೈ: ಐಪಿಎಲ್ ಟೂರ್ನಿಯ ನಿನ್ನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದದ ಸೋಲಿನ ನಡುವೆಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್ ಆರ್ ಅಶ್ವಿನ್ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.
ನಿನ್ನೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 50 ರನ್ ಗಳ ಭರ್ಜರಿ ಜಯ ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಾಯಕ ರಜತ್ ಪಾಟಿದಾರ್ ಅವರ ಅರ್ಧಶತಕದ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಆರ್ ಸಿಬಿ ನೀಡಿದ 198 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಚೆನ್ನೈ ತಂಡ ನಿಗದಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳನ್ನಷ್ಟೇ ಗಳಿಸಿ 50 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ಆರ್ ಅಶ್ವಿನ್ ದಾಖಲೆ
ಇನ್ನು ಈ ಪಂದ್ಯದಲ್ಲಿ ಚೆನ್ನೈ ತಂಡದ ಆರ್ ಅಶ್ವಿನ್ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ. ಆರ್ ಸಿಬಿಯ ದೇವದತ್ ಪಡಿಕ್ಕಲ್ ವಿಕೆಟ್ ಪಡೆಯುವ ಮೂಲಕ ಆರ್ ಅಶ್ವಿನ್ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಗರಿಷ್ಟ ವಿಕೆಟ್ ಪಡೆದ 5ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಶ್ವಿನ್ ಈಗ 214 ಐಪಿಎಲ್ ಪಂದ್ಯಗಳಲ್ಲಿ 182 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಂತೆಯೇ ಇದೇ ಅಶ್ವಿನ್ 2010 ಮತ್ತು 2011 ರಲ್ಲಿ ಸಿಎಸ್‌ಕೆ ಚಾಂಪಿಯನ್‌ಶಿಪ್ ವಿಜಯಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಸುನಿಲ್ ನರೇನ್ ದಾಖಲೆ ಪತನ
ಇನ್ನು ಆರ್ ಅಶ್ವಿನ್ ತಮ್ಮ ಈ ದಾಖಲೆ ಮೂಲಕ ವೆಸ್ಟ್ ಇಂಡೀಸ್ ತಂಡದ ಸುನಿಲ್ ನರೇನ್ ದಾಖಲೆಯನ್ನೂ ಹಿಂದಿಕ್ಕಿದ್ದಾರೆ. 182 ವಿಕೆಟ್ ಪಡೆದಿರುವ ಭುವನೇಶ್ವರ್ ಕುಮಾರ್ ಜೊತೆ ಜಂಟಿ 5ನೇ ಸ್ಥಾನದಲ್ಲಿದ್ದಾರೆ. ಸುನಿಲ್ ನರೇನ್ ಒಟ್ಟು 181 ವಿಕೆಟ್ ಪಡೆದಿದ್ದು, ಇದೀಗ 6ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಈ ಪಟ್ಟಿಯಲ್ಲಿ ಯುಜುವೇಂದ್ರ ಚಹಲ್ ಅಗ್ರಸ್ಥಾನದಲ್ಲಿದ್ದು ಚಹಲ್ ಒಟ್ಟು 205 ವಿಕೆಟ್ ಕಬಳಿಸಿದ್ದಾರೆ. ಅಂತೆಯೇ 2ನೇ ಸ್ಥಾನದಲ್ಲಿರುವ ಪಿಯೂಷ್ ಚಾವ್ಲಾ 192 ವಿಕೆಟ್ ಪಡೆದು 2ನೇ ಸ್ಥಾನದಲ್ಲಿದ್ದಾರೆ.
Advertisement