
ಚೆನ್ನೈ: ಐಪಿಎಲ್ ಟೂರ್ನಿಯ ಆರ್ ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ 50 ರನ್ ಗಳ ಅಂತರದಲ್ಲಿ ರಜತ್ ಪಟಿದಾರ್ ಪಡೆ ಗೆದ್ದು ಬೀಗಿದ್ದು, ಆ ಮೂಲಕ 17 ವರ್ಷಗಳ ಬಳಿಕ ಚೆಪಾಕ್ ಅಂಗಣದಲ್ಲಿ ಮೊದಲ ಗೆಲುವು ಸಾಧಿಸಿದೆ.
ನಿನ್ನೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 50 ರನ್ ಗಳ ಭರ್ಜರಿ ಜಯ ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಾಯಕ ರಜತ್ ಪಾಟಿದಾರ್ ಅವರ ಅರ್ಧಶತಕದ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಆರ್ ಸಿಬಿ ನೀಡಿದ 198 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಚೆನ್ನೈ ತಂಡ ನಿಗದಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳನ್ನಷ್ಟೇ ಗಳಿಸಿ 50 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ಗಮನ ಸೆಳೆದ ಆರ್ ಸಿಬಿ ಮಹಿಳಾ ಅಭಿಮಾನಿ
ಇನ್ನು ನಿನ್ನೆ ಆರ್ ಸಿಬಿ ಬ್ಯಾಟಿಂಗ್ ನ ಅಂತಿಮ ಓವರ್ ನಲ್ಲಿ ಬೆಂಗಳೂರು ತಂಡದ ಟಿಮ್ ಡೇವಿಡ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಅತ್ತ ಟಿಮ್ ಡೇವಿಡ್ ಸತತ ಸಿಕ್ಸರ್ ಗಳನ್ನು ಸಿಡಿಸುತ್ತಿದ್ದರೆ ಡಗೌಟ್ ನಲ್ಲಿ ಕುಳಿತಿದ್ದ ಆರ್ ಸಿಬಿ ಆಟಗಾರರು ಕುಣಿದು ಕುಪ್ಪಳಿಸುತ್ತಿದ್ದರು. ಅಂತೆಯೇ ಆರ್ ಸಿಬಿ ಅಭಿಮಾನಿಗಳೂ ಕೂಡ ಘೋಷಣೆ ಕೂಗುತ್ತಾ ಸಂಭ್ರಮಿಸುತ್ತಿದ್ದರು. ಆದರೆ ಅಲ್ಲೋರ್ವ ಮಹಿಳಾ ಅಭಿಮಾನಿ ಮಾತ್ರ ಇವೆಲ್ಲದಕ್ಕಿಂತ ಭಿನ್ನವಾಗಿ ಸಂಭ್ರಮಿಸಿ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
CSK ಅಭಿಮಾನಿ ಕೊರಳಲ್ಲಿದ್ದ whistle ಊದಿ ಆರ್ ಸಿಬಿ ಮಹಿಳಾ ಅಭಿಮಾನಿ ಸಂಭ್ರಮ
ಆರ್ ಸಿಬಿ ಇನ್ನಿಂಗ್ಸ್ ನ ಅಂತಿಮ ಓವರ್ ವೇಳೆ ತಂಡದ ದೈತ್ಯ ಬ್ಯಾಟರ್ ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೊನೆಯ ಓವರ್‌ನಲ್ಲಿ ಟಿಮ್ ಡೇವಿಡ್ ಸ್ಯಾಮ್ ಕರನ್ ವಿರುದ್ಧ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿದರು.
ಈ ವೇಳೆ ಪೆವಿಲಿಯನ್ ನಲ್ಲಿದ್ದ ಒಬ್ಬ ಮಹಿಳಾ RCB ಅಭಿಮಾನಿ ವಿಶೇಷ ರೀತಿಯಲ್ಲಿ ಸಂಭ್ರಮಿಸಿದರು. ಅತ್ತ ಟಿಮ್ ಡೇವಿಡ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುತ್ತಲೇ ತನ್ನ ಪಕ್ಕದಲ್ಲಿದ್ದ CSK ಅಭಿಮಾನಿಯ ಕೊರಳಲ್ಲಿದ್ದ ಶಿಳ್ಳೆಯನ್ನು ಊದುವ ಮೂಲಕ ಸಂತೋಷವನ್ನು ವ್ಯಕ್ತಪಡಿಸಿದರು. ಈ ವೇಳೆ ಸಿಎಸ್ ಕೆ ಅಭಿಮಾನಿ ಹ್ಯಾಪುಮೊರೆ ಹಾಕಿಕೊಂಡು ಕುಳಿತಿದ್ದರು.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಲಕ್ಷಾಂತರ ವ್ಯೂಸ್ ಮತ್ತು ಲೈಕ್ ಶೇರ್ ಪಡೆದಿದೆ.
Advertisement