
ಚೆನ್ನೈ: ಬರೊಬ್ಬರಿ 17 ವರ್ಷಗಳ ಬಳಿಕ ಸಿಎಸ್ ಕೆ ಭದ್ರಕೋಟೆ ಚಿಪಾಕ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಭೇರಿ ಬಾರಿಸಿದ್ದು, ಮೊದಲ ಬಾರಿಗೆ ಅತೀ ಹೆಚ್ಚು ಸಂಖ್ಯೆಯಲ್ಲಿ ಆರ್ ಸಿಬಿ ಅಭಿಮಾನಿಗಳು ಕಂಡುಬಂದರು.
ಹೌದು.. ನಿನ್ನೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 50 ರನ್ ಗಳ ಭರ್ಜರಿ ಜಯ ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಾಯಕ ರಜತ್ ಪಾಟಿದಾರ್ ಅವರ ಅರ್ಧಶತಕದ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಆರ್ ಸಿಬಿ ನೀಡಿದ 198 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಚೆನ್ನೈ ತಂಡ ನಿಗದಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳನ್ನಷ್ಟೇ ಗಳಿಸಿ 50 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
17 ವರ್ಷಗಳ ಬಳಿಕ ಗೆಲುವು
ಇನ್ನು ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಕಳೆದ 17 ವರ್ಷಗಳಿಂದ ಗೆಲುವು ಸಾಧಿಸಿರಲಿಲ್ಲ. ಆದರೆ ನಿನ್ನೆಯ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದು ತನ್ನ ಸೋಲಿನ ಸರಪಳಿ ಕಳಚಿಕೊಂಡಿದೆ.
ಚಿಪಾಕ್ ನಲ್ಲಿ ಮೊಳಗಿದ RCB, RCB ಘೋಷಣೆ
ಇನ್ನು ಚೆಪಾಕ್ ಕ್ರೀಡಾಂಗಣ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರು ಮೈದಾನ.. ಹೀಗಾಗಿ ಇಲ್ಲಿ ಸಾಮಾನ್ಯವಾಗಿಯೇ ಚೆನ್ನೈ ತಂಡದ ಅಭಿಮಾನಿಗು ಯಥೇಚ್ಚವಾಗಿ ಕಾಣುತ್ತಾರೆ. ಕಳೆದ ಬಹುತೇಕ ಎಲ್ಲ ಐಪಿಎಲ್ ಟೂರ್ನಿಗಳಲ್ಲೂ ಚೆಪಾಕ್ ನಲ್ಲಿ ಹಳದಿ ಬಣ್ಣದ ಜೆರ್ಸಿಗಳದ್ದೇ ಕಾರುಬಾರಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಚೆಪಾಕ್ ನಲ್ಲಿ ಆರ್ ಸಿಬಿ ಅಭಿಮಾನಿಗಳ ಸಂಖ್ಯೆ ಕೂಡ ಗಣನೀಯವಾಗಿತ್ತು.
Srikanth ಬೇಸ್ತು
ಇನ್ನು ಚೆನ್ನೈ ಮೈದಾನದಲ್ಲಿ ಆರ್ ಸಿಬಿ ಅಭಿಮಾನಿಗಳ ಕಲರವ ಕಂಡು ಸ್ವತಃ ವೀಕ್ಷಕ ವಿವರಣೆಗಾರ ಹಾಗೂ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಕೂಡ ಬೇಸ್ತು ಬಿದ್ದಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯದ ಕುರಿತು ವಿವರಣೆ ಕಾರ್ಯಕ್ರಮದಲ್ಲಿ ಸ್ವತಃ ಕ್ರಿಸ್ ಶ್ರೀಕಾಂತ್ ಈ ಬಗ್ಗೆ ಮಾತನಾಡಿದ್ದು, ಇದೇ ಮೊದಲ ಬಾರಿಗೆ ಚೆಪಾಕ್ ಕ್ರೀಡಾಂಗಣದಲ್ಲಿ ಚೆನ್ನೈಗಿಂತ ಹೆಚ್ಚು ಆರ್ ಸಿಬಿ ಅಭಿಮಾನಿಗಳನ್ನು ಕಂಡೆ ಎಂದು ಹೇಳಿಕೊಂಡಿದ್ದಾರೆ.
Advertisement