ಶುಕ್ರವಾರ ಚೆಪಾಕ್‌ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಸಿಎಸ್‌ಕೆ vs ಆರ್‌ಸಿಬಿ ಪಂದ್ಯದ ನಂತರ ವಿರಾಟ್ ಕೊಹ್ಲಿ ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಖಲೀಲ್ ಅಹ್ಮದ್ ಅವರೊಂದಿಗೆ ಮಾತುಕತೆ ನಡೆಸುತ್ತಿರುವುದು ಕಂಡುಬಂದಿದೆ. ಆರ್‌ಸಿಬಿ ಸಿಎಸ್‌ಕೆ ವಿರುದ್ಧ 50 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಬರೋಬ್ಬರಿ 17 ವರ್ಷಗಳ ನಂತರ ಸಿಎಸ್‌ಕೆಯನ್ನು ತವರಿನಲ್ಲಿ ಸೋಲಿಸಿದೆ.
ಕೊಹ್ಲಿ ಮತ್ತು ಖಲೀಲ್ ನಡುವಿನ ಸಂಭಾಷಣೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಶುಕ್ರವಾರ ಪಂದ್ಯದ ನಂತರ ಆರ್‌ಸಿಬಿ ಬ್ಯಾಟ್ಸ್‌ಮನ್ ಕೊಹ್ಲಿ ಸಿಎಸ್‌ಕೆ ವೇಗಿ ಖಲೀಲ್ ಅವರಿಗೆ ಎಚ್ಚರಿಕೆ ನೀಡಿದ್ದಾರೆಯೇ ಎಂದು ನೆಟ್ಟಿಗರು ಊಹಿಸಿದ್ದಾರೆ.
ವಿಡಿಯೋದಲ್ಲಿ ರವೀಂದ್ರ ಜಡೇಜಾ ಅವರೊಂದಿಗೆ ನಗುತ್ತಾ ಮಾತನಾಡುತ್ತಿದ್ದ ವಿರಾಟ್ ಕೊಹ್ಲಿ, ಪಕ್ಕಕ್ಕೆ ತಿರುಗಿ ತೀಕ್ಷ್ಣವಾಗಿ ಏನನ್ನೋ ಹೇಳುತ್ತಾರೆ. ನಿನಗಿದೆ, ಆಮೇಲೆ ನೋಡ್ಕೊತೀನಿ ಎನ್ನುವ ದಾಟಿಯಲ್ಲಿ ಬೆರಳನ್ನು ತೋರಿಸಿ ಮಾತನಾಡುತ್ತಾರೆ. ಖಲೀಲ್ ಅಹ್ಮದ್ ಕೂಡ ಕೊಹ್ಲಿ ಅವರೊಂದಿಗೆ ಮಾತುಕತೆಗೆ ಧುಮುಕುತ್ತಾರೆ. ಕೊನೆಗೆ ಕೊಹ್ಲಿ ಖಲೀಲ್ ಅವರ ಕೈಕುಲುಕಿ ಮುನ್ನಡೆಯುತ್ತಾರೆ.
ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ LBW ಅಪೀಲ್ ಮಾಡುವ ಮುನ್ನವೇ ಖಲೀಲ್ ಅಹ್ಮದ್ ಸಂಭ್ರಮಿಸಿದರು. ತಾವೇ ಸ್ಟಾರ್ ಬ್ಯಾಟ್ಸ್‌ಮನ್ ಅನ್ನು ಔಟ್ ಮಾಡಿದ್ದೇನೆ ಎಂದುಕೊಂಡರು. ಆದರೆ, ಅಂಪೈರ್ ಔಟ್ ಕೊಟ್ಟಿರಲಿಲ್ಲ. ಬಳಿಕ ಸಿಎಸ್‌ಕೆ ರಿವ್ಯೂ ಆಯ್ಕೆ ಮಾಡಿಕೊಂಡಿತು. ಕೊಹ್ಲಿ ನಾಟ್ ಔಟ್ ಎಂದು ತೀರ್ಪು ನೀಡಿದ್ದರಿಂದ ನಿರಾಸೆ ಉಂಟಾಯಿತು. ಇದರಿಂದ ಹತಾಶಗೊಂಡ ಖಲೀಲ್, ತೀಕ್ಷ್ಣವಾದ ಬೌನ್ಸರ್ ಎಸೆದರು. ಅದನ್ನು ಹೊಡೆಯಲು ಕೊಹ್ಲಿ ಪ್ರಯತ್ನಿಸಿದರಾದರೂ ವಿಫಲರಾದರು. ಇದು ಇಬ್ಬರ ನಡುವೆ ತೀವ್ರವಾದ ನೋಟಕ್ಕೆ ಕಾರಣವಾಯಿತು.
ಕೊಹ್ಲಿ 30 ಎಸೆತಗಳಲ್ಲಿ 31 ರನ್ ಗಳಿಸಿದರು. ಮತೀಷ್ ಪತಿರಾಣಾ ಎಸೆತದಲ್ಲಿ ಚೆಂಡು ಕೊಹ್ಲಿ ಅವರ ಹೆಲ್ಮೆಟ್‌ಗೆ ಬಿತ್ತು. ನಂತರದ ಎರಡು ಎಸೆತಗಳಲ್ಲಿ ವಿರಾಟ್ ಸಿಕ್ಸರ್ ಬಾರಿಸಿದರು. ಆದರೆ, ಕೊಹ್ಲಿ ಅವರ ವಿಕೆಟ್ ಅನ್ನು ನೂರ್ ಅಹ್ಮದ್ ಪಡೆದುಕೊಂಡರು. ಆಗ ವಿರಾಟ್ ಕೊಹ್ಲಿ ಸಂಪೂರ್ಣ ಹತಾಶೆಯಿಂದ ಹೊರನಡೆದರು.
Advertisement