
ಅಹ್ಮದಾಬಾದ್: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಯುವ ಆಟಗಾರ ಸಾಯಿ ಕಿಶೋರ್ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯಾರನ್ನು ಸ್ಲೆಡ್ಜ್ ಮಾಡಿ ತೀವ್ರ ಮುಜುಗರಕ್ಕೀಡಾಗಿದ್ದಾರೆ.
ಹೌದು.. ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 20 ಓವರ್ಗಳಲ್ಲಿ 196 ರನ್ ಕಲೆಹಾಕಿದರೆ, ಮುಂಬೈ ಇಂಡಿಯನ್ಸ್ 160 ರನ್ಗಳಿಸಲಷ್ಟೇ ಶಕ್ತವಾಯಿತು.
ಚೇಸಿಂಗ್ ವೇಳೆ ಕಿರಿಕ್
ಇನ್ನು ಗುಜರಾತ್ ಟೈಟಾನ್ಸ್ ನೀಡಿದ್ದ 197 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತ್ತು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಗುಜರಾತ್ ತಂಡದ ಬೌಲರ್ ಸಾಯಿ ಕಿಶೋರ್ ನಡುವೆ ಸಣ್ಣ ಕಿರಿಕ್ ನಡೆದಿದೆ.
ಹಾರ್ದಿಕ್ ಪಾಂಡ್ಯ ರನ್ಗಳಿಸಲು ಹೆಣಗಾಡುತ್ತಿದ್ದ ಸಂದರ್ಭದಲ್ಲಿ ಸಾಯಿ ಕಿಶೋರ್ ಅವರನ್ನು ಮತ್ತಷ್ಟು ಪ್ರಬಲ ಬೌಲಿಂಗ್ ಮಾಡುತ್ತಿದ್ದರು. ಸ್ಪಿನ್ನರ್ ಸಾಯಿ ಕಿಶೋರ್ ಎಸೆತಗಳಲ್ಲಿ ಬಿಗ್ ಶಾಟ್ ಬಾರಿಸಲು ಹಾರ್ದಿಕ್ ಪಾಂಡ್ಯ ತಡಕಾಡಿದರು. ಇದೇ ವೇಳೆ ಕೋಪದಿಂದ ಬೌಲರ್ನತ್ತ ನೋಡಿ ಅಶ್ಲೀಲವಾಗಿ ಬೈದಿದ್ದಾರೆ.
15ನೇ ಓವರ್ ನಲ್ಲಿ ಕಿರಿಕ್
15ನೇ ಓವರ್ ಬೌಲಿಂಗ್ ಮಾಡಲು ಬಂದ ತಮಿಳುನಾಡು ಮೂಲದ ಯುವ ಬೌಲರ್ ಸಾಯಿ ಕಿಶೋರ್ ಬೌಲಿಂಗ್ ಎದುರಿಸಲು ಹಾರ್ದಿಕ್ ಪಾಂಡ್ಯ ಪರದಾಡಿದರು. ಡಾಟ್ ಬಾಲ್ ಮೇಲೆ ಡಾಟ್ ಮಾಡಿಕೊಳ್ಳುತ್ತಿದ್ದರು. ಹೊಡೆಯಲೇಬೇಕಾದ ಒತ್ತಡದಲ್ಲಿಯೂ ಹಾರ್ದಿಕ್ ಡಾಟ್ ಬಾಲ್ ಮಾಡಿದರು. ಸಾಯಿ ಕಿಶೋರ್ ಎಸೆದ 3ನೇ ಎಸೆತವನ್ನು ಹಾರ್ದಿಕ್ ಪಾಂಡ್ಯ ಗಟ್ಟಿಯಾಗಿ ಸ್ಚ್ರೈಟ್ ಡ್ರೈವ್ ಗೆ ಪ್ರಯತ್ನಿಸುತ್ತಾರೆ. ಆದರೆ ಚೆಂಡು ನೇರವಾಗಿ ಬೌಲರ್ ಸಾಯಿ ಕಿಶೋರ್ ಕೈಸೇರುತ್ತದೆ.
ಈ ವೇಳೆ ಬಾಲ್ ಹಿಡಿದ ಸಾಯಿ ಕಿಶೋರ್ ನೇರವಾಗಿ ಹಾರ್ದಿಕ್ ರತ್ತ ಬಾಲ್ ಎಸೆಯಲು ಮುಂದಾಗುತ್ತಾರೆ. ಆ ಸಂದರ್ಭದಲ್ಲಿ ಕಿಶೋರ್ ಬಳಿ ಬಂದ ಹಾರ್ದಿಕ್ ಏನೋ ಹೇಳುತ್ತಾರೆ. ಆದ್ರೆ ಕಿಶೋರ್ ಹಾರ್ದಿಕ್‌ರನ್ನು ನೋಡುತ್ತಾ ಸುಮ್ಮನೆ ನಿಂತಿರುತ್ತಾರೆ. ಆ ಸಂದರ್ಭದಲ್ಲಿ ಕ್ರೀಸ್‌ಗೆ ಮರಳಿದ ಹಾರ್ದಿಕ್ ಏನೋ ಕೆಟ್ಟ ಶಬ್ಧದಿಂದ ಹೋಗು ಎನ್ನುವಂತೆ ಸನ್ನೆ ಮಾಡುತ್ತಾರೆ.
ಹಾರ್ದಿಕ್ ಪಾಂಡ್ಯ ತನ್ನನ್ನು ಗುರಿಯಾಗಿಸಿ ಅಶ್ಲೀಲವಾಗಿ ಬೈದಿರುವುದು ಕೇಳಿಸಿಕೊಂಡ ಸಾಯಿ ಕಿಶೋರ್ ನೇರವಾಗಿ ಹೋಗಿ ಹಾರ್ದಿಕ್ ಪಾಂಡ್ಯರನ್ನು ದಿಟ್ಟಿಸಿ ನೋಡಿದರು. ಅತ್ತ ಕಡೆ ಮೊದಲೇ ಕೋಪದಲ್ಲಿದ್ದ ಹಾರ್ದಿಕ್ ಪಾಂಡ್ಯ ಕೂಡ ಮುಂದೆ ಬಂದು ಕಣ್ಣನಲ್ಲಿ ಕಣ್ಣಿಟ್ಟು ಗುರಾಯಿಸಿದರು. ಅಷ್ಟರಲ್ಲಾಗಲೇ ಅಂಪೈರ್ ಹಾಗೂ ಸಹ ಆಟಗಾರರು ಮಧ್ಯಪ್ರವೇಶಿಸಿ ಉಭಯ ಆಟಗಾರರನ್ನು ದೂರ ಮಾಡಿದರು.
ಪರಸ್ಪರ ತಬ್ಬಿಕೊಂಡ ಆಟಗಾರರು
ಇನ್ನು ಈ ಪಂದ್ಯದಲ್ಲಿ 197 ರನ್ಗಳನ್ನು ಬೆನ್ನುಹತ್ತಿದ ಮುಂಬೈ ಇಂಡಿಯನ್ಸ್ ಅಂತಿಮವಾಗಿ 160 ರನ್ಗಳಿಸಿ 36 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಸೋಲಿನ ಬಳಿಕ ಸಾಯಿ ಕಿಶೋರ್ ಹಾಗೂ ಹಾರ್ದಿಕ್ ಪಾಂಡ್ಯ ಮುಖಾಮುಖಿಯಾಗಿದ್ದರು. ಈ ವೇಳೆ ಇಬ್ಬರು ಆಟಗಾರರು ಪರಸ್ಪರ ನಗುತ್ತಾ ಆಲಂಗಿಸಿಕೊಳ್ಳುವ ಮೂಲಕ ಎಲ್ಲಾ ಕಿತ್ತಾಟಗಳಿಗೂ ತೆರೆ ಎಳೆದರು. ಅಲ್ಲದೆ ಚೆಂಡು ಎಸೆದು ಹಾರ್ದಿಕ್ ಪಾಂಡ್ಯರನ್ನು ಸ್ಲೆಡ್ಜ್ ಮಾಡಿದ್ದ ಸಾಯಿ ಕಿಶೋರ್ ಕೂಡ ಮುಜುಗರದಿಂದಲೇ ತಬ್ಬಿಕೊಂಡರು.
Advertisement