IPL 2025: ರೋಚಕ ಹಣಾಹಣಿಯಲ್ಲಿ CSK ವಿರುದ್ಧ RCB 2 ರನ್ ಗೆಲುವು
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ರೋಚಕ ಹಣಾಹಣಿಯಲ್ಲಿ ಆರ್ ಸಿಬಿ ತಂಡ ಗೆದ್ದು ಬೀಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದ್ದು ಚೆನ್ನೈಗೆ 214 ರನ್ ಗಳ ಟಾರ್ಗೆಟ್ ನೀಡಿತ್ತು. ಆರ್ ಸಿಬಿ ನೀಡಿದ 214 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ತಂಡ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್ ಪೇರಿಸಿದ್ದು 2 ರನ್ ಗಳಿಂದ ಆರ್ ಸಿಬಿಗೆ ಶರಣಾಯಿತು.
ಚೆನ್ನೈ ಪರ ಆಯುಷ್ ಮ್ಹಾತ್ರೆ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು 94 ರನ್ ಗಳಿಗೆ ಔಟಾಗಿ ಶತಕ ವಂಚಿತರಾದರು. ಇನ್ನು ರವೀಂದ್ರ ಜಡೇಜಾ ಅರ್ಧ ಶತಕ ಸಿಡಿಸಿದ್ದು ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.
ಆರ್ ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ಜಾಕೋಬ್ ಬೆಥೆಲ್ (55) ಮತ್ತು ವಿರಾಟ್ ಕೊಹ್ಲಿ (62) ಅವರ 97 ರನ್‌ಗಳ ಜೊತೆಯಾಟ ಮತ್ತು ರೊಮಾರಿಯೊ ಶೆಫರ್ಡ್ (14 ಎಸೆತ, ಅಜೇಯ 53, ನಾಲ್ಕು ಬೌಂಡರಿ ಮತ್ತು ಆರು ಸಿಕ್ಸರ್) ಸ್ಫೋಟಕ ಅರ್ಧಶತಕದ ದಾಖಲಿಸಿದರು. ಪಂದ್ಯದ ಮೊದಲ ಓವರ್‌ನಿಂದಲೇ ಆರಂಭಿಕರಾದ ಬೆಥೆಲ್ ಮತ್ತು ಕೊಹ್ಲಿ ಆಕ್ರಮಣಕಾರಿಯಾಗಿ ಆಟ ಆರಂಭಿಸಿ ಚೆನ್ನೈ ಬೌಲರ್‌ಗಳನ್ನು ಸದೆಬಡಿದು ಸ್ಕೋರ್‌ಬೋರ್ಡ್ ಅನ್ನು ವೇಗವಾಗಿ ಚಲಿಸುವಂತೆ ಮಾಡಿದರು. ಪರಿಣಾಮ ಆರ್ ಸಿಬಿ 213 ರನ್ ಕಲೆಹಾಕಲು ಸಾಧ್ಯವಾಯಿತು.
ಚೆನ್ನೈ ಪರ ಬೌಲಿಂಗ್ ನಲ್ಲಿ ಮತೀಶ್ ಪತಿರಾಣಾ 3 ವಿಕೆಟ್ ಪಡೆದರೆ ನೂರ್ ಅಹ್ಮದ್ ಮತ್ತು ಸ್ಯಾಮ್ ಕುರಾನ್ ತಲಾ 1 ವಿಕೆಟ್ ಪಡೆದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ