
ನವದೆಹಲಿ: ಟೆಸ್ಟ್ ಕ್ರಿಕೆಟ್ ರನ್ ಮೆಷಿನ್ ವಿರಾಟ್ ಕೊಹ್ಲಿ ನಿವೃತ್ತಿ ಘೋಷಣೆ ಮಾಡಿದ್ದು, ಈ ಬೆಳವಣಿಗೆಯಿಂದಾಗಿ ಇಡೀ ಕ್ರಿಕೆಟ್ ಜಗತ್ತು ದಿಗ್ಭ್ರಮೆ ವ್ಯಕ್ತಪಡಿಸಿದೆ.
ಈ ನಡುವೆ ವಿರಾಟ್ ಕೊಹ್ಲಿ ನಿವೃತ್ತಿಗೆ ಕ್ರಿಕೆಟ್ ಜಗತ್ತಿನ ಸ್ಟಾರ್ ಆಟಗಾರರು ಶುಭ ಕೋರಿದ್ದು, ಇದೀಗ ಭಾರತ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಕೂಡ ವಿರಾಟ್ ಕೊಹ್ಲಿಗೆ ಭಾವುಕ ವಿದಾಯ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ವಿರಾಟ್ ಕೊಹ್ಲಿ ಅವರಿಗೆ, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೃದಯಸ್ಪರ್ಶಿ ವಿದಾಯ ಹೇಳಿದ್ದಾರೆ. ಗೌತಮ್ ಗಂಭೀರ್ ಅವರ ಎಕ್ಸ್ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಇಬ್ಬರ ನಡುವಿನ ಸ್ನೇಹ ಸಂಬಂಧದ ಬಗೆಗಿನ ಚರ್ಚೆಗಳಿಗೆ ಗ್ರಾಸವಾಗಿದೆ.
ಪೋಸ್ಟ್ ನಲ್ಲೇನಿದೆ?
ವಿರಾಟ್ ಕೊಹ್ಲಿ ಅವರ ಟೆಸ್ಟ್ ನಿವೃತ್ತಿ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಟ್ವೀಟ್ ಮಾಡಿರುವ ಗೌತಮ್ ಗಂಭೀರ್, "ಸಿಂಹದಷ್ಟು ಉತ್ಸಾಹ ಹೊಂದಿರುವ ಮನುಷ್ಯ. ನಿಮ್ಮನ್ನು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ. ಗೌತಮ್ ಗಂಭೀರ್ ಅವರ ಈ ಎಕ್ಸ್ ಪೋಸ್ಟ್‌ಗೆ ಭಾರೀ ಪ್ರತಿಕ್ರಿಯೆಗಳು ಬರುತ್ತಿವೆ.
ಕೊಹ್ಲಿ-ಗಂಭೀರ್ ಬಾಂಧವ್ಯ
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಗೌತಮ್ ಗಂಭೀರ್ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 2016ರಲ್ಲಿ ಗೌತಮ್ ಗಂಭೀರ್ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದಾಗ, ವಿರಾಟ್ ಕೊಹ್ಲಿ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದರು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಗೌತಮ್ ಗಂಭೀರ್, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಆಡಿದ್ದರು.
ಆದರೆ ಇಂಗ್ಲೆಂಡ್ ವಿರುದ್ಧದ ಕೊನೆಯ 3 ಟೆಸ್ಟ್ ಪಂದ್ಯಗಳಿಗೆ ಗೌತಮ್ ಗಂಭೀರ್ ಅವರನ್ನು ಕೈಬಿಡಲಾಗಿತ್ತು. ಇದಾದ ಬಳಿಕ ಗೌತಮ್ ಗಂಭೀರ್ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಲಿಲ್ಲ. ಬಳಿಕ ನಿವೃತ್ತರಾಗಿದ್ದ ಗಂಭೀರ್ ಐಪಿಎಲ್ ನಲ್ಲಿ ಲಕ್ನೋ ತಂಡದ ಮೆಂಟರ್ ಆಗಿ ಸೇವೆ ಸಲ್ಲಿಸಿದ್ದರು. 2023ರಲ್ಲಿ ಇದೇ ಸಂದರ್ಭದಲ್ಲೇ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವೆ ನಡೆದ ಸಂಘರ್ಷ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು
ಬಳಿಕ ಇದೇ ಗಂಭೀರ್ ಟೀಂ ಇಂಡಿಯಾದ ಪ್ರಧಾನ ಕೋಚ್ ಆಗಿ ಆಯ್ಕೆಯಾದ ಬಳಿಕ ಇಬ್ಬರೂ ತಮ್ಮ ವೈಷಮ್ಯ ಮರೆತು ಆಪ್ತರಾಗಿದ್ದಾರೆ.
Advertisement