ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಐಪಿಎಲ್ 2025ನ್ನು ಒಂದು ವಾರ ಸ್ಥಗಿತಗೊಳಿಸಿತ್ತು. ಪಾಕಿಸ್ತಾನ ಮತ್ತು ಭಾರತ ಇದೀಗ ಕದನ ವಿರಾಮ ಒಪ್ಪಂದ ಮಾಡಿಕೊಂಡಿದ್ದು ಪಂದ್ಯಾವಳಿಯನ್ನು ಪುನರಾರಂಭಿಸಕ್ಕೆ ಬಿಸಿಸಿಐ ಮುಂದಾಗಿದೆ ಎನ್ನಲಾಗಿದೆ. ಈ ಬೆನ್ನಲ್ಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ.
ಐಪಿಎಲ್ ತಾತ್ಕಾಲಿಕವಾಗಿ ಸ್ಥಗಿತಗೊಂಡ ಬೆನ್ನಲ್ಲೇ ಎಲ್ಲ 10 ಫ್ರಾಂಚೈಸಿಗಳ ವಿದೇಶಿ ಆಟಗಾರರು ತವರಿಗೆ ಮರಳಿದ್ದರು. ಇದೀಗ ಆರ್‌ಸಿಬಿ ತಂಡದ ಪ್ರಮುಖ ವೇಗಿ ಜಾಶ್ ಹೇಜಲ್‌ವುಡ್ ಮತ್ತೆ ಐಪಿಎಲ್‌ಗೆ ಬರುವ ಕುರಿತು ಅನುಮಾನ ವ್ಯಕ್ತವಾಗಿದೆ. ಭುಜದ ನೋವಿನಿಂದ ಬಳಲುತ್ತಿದ್ದ ಆಸ್ಟ್ರೇಲಿಯಾದ ವೇಗಿ ಮೇ 3 ರಂದು ತವರಿನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಆರ್‌ಸಿಬಿ ಪಂದ್ಯದಿಂದ ಹೊರಗುಳಿದಿದ್ದರು. ಮೇ 9ರಂದು ಪಂದ್ಯಾವಳಿಯನ್ನು ನಿಲ್ಲಿಸುವ ಮೊದಲೇ ಅವರ ಮುಂದಿನ ಪಂದ್ಯಕ್ಕೆ ಲಭ್ಯರಾಗುವ ಕುರಿತು ಅನುಮಾನ ವ್ಯಕ್ತವಾಗಿತ್ತು. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಇರುವುದರಿಂದ, ಐಪಿಎಲ್‌ಗಾಗಿ ಭಾರತಕ್ಕೆ ಮರಳುವುದಿಲ್ಲ ಎನ್ನಲಾಗಿದೆ.
ಈ ವರ್ಷದ ಆರಂಭದಲ್ಲಿ ಸೈಡ್ ಸ್ಟ್ರೈನ್ ಮತ್ತು ಕಾಲಿನ ಸ್ನಾಯು ನೋವು ಸೇರಿದಂತೆ ಹಲವಾರು ಗಾಯಗಳಿಂದ ಚೇತರಿಸಿಕೊಳ್ಳಲು ಕಠಿಣ ಪುನರ್ವಸತಿ ಚಿಕಿತ್ಸೆಗೆ ಒಳಗಾಗಿದ್ದ ಹೇಜಲ್‌ವುಡ್, ಮತ್ತೆ ಲಯಕ್ಕೆ ಮರಳಲು ಐಪಿಎಲ್ ಅನ್ನು ವೇದಿಕೆಯಾಗಿ ಬಳಸುತ್ತಿದ್ದರು.
ಇದರ ಹೊರತಾಗಿಯೂ, ಕ್ರಿಕೆಟ್ ಆಸ್ಟ್ರೇಲಿಯಾ ಎಚ್ಚರಿಕೆಯ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ. ಜೂನ್ ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿ WTC ಫೈನಲ್‌ಗೆ ಮುನ್ನ ಅಂತಿಮ ಕಂಡೀಷನಿಂಗ್ ಶಿಬಿರ ನಡೆಯಲಿದ್ದು, ಅವರು ಅದರಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ, ಅವರು IPLಗೆ ಮರಳುವುದು ಅನಿಶ್ಚಿತವಾಗಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡ ಈಗಾಗಲೇ ಪ್ಲೇಆಫ್ ಸ್ಪರ್ಧೆಯಿಂದ ಹೊರಗುಳಿದಿದ್ದು, ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಮತ್ತು ಟ್ರಾವಿಸ್ ಹೆಡ್, ಜೂನ್ 11 ರಿಂದ ಲಾರ್ಡ್ಸ್‌ನಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್‌ಗೆ ತಯಾರಿ ನಡೆಸಲು ಆಸ್ಟ್ರೇಲಿಯಾದಲ್ಲಿಯೇ ಉಳಿಯಲು ಆಯ್ಕೆ ಮಾಡಿಕೊಳ್ಳಬಹುದು ಎನ್ನಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಮಿಚೆಲ್ ಸ್ಟಾರ್ಕ್ ಕೂಡ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ನ್ಯೂಜಿಲೆಂಡ್ ತಂಡದ ಹೆಚ್ಚಿನ ಸದಸ್ಯರು ಈಗಾಗಲೇ ತವರಿಗೆ ಮರಳಿದ್ದಾರೆ. ಆದರೆ, ಕ್ರಿಕೆಟ್ ದಕ್ಷಿಣ ಆಫ್ರಿಕಾ ತನ್ನ ಆಟಗಾರರು ಮೇ 25ರ NOC ಗಡುವನ್ನು ಮೀರಿ ತಮ್ಮ ವಾಸ್ತವ್ಯವನ್ನು ವಿಸ್ತರಿಸಬಹುದೇ ಎಂದು ಇನ್ನೂ ನಿರ್ಧರಿಸಿಲ್ಲ. ಆಟಗಾರರ ಸುರಕ್ಷತೆಯು ಅತ್ಯಂತ ಮುಖ್ಯವಾಗಿದ್ದು, CSA ಮಂಡಳಿಯು ಈ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.
Advertisement