
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಒಂದು ವಾರ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಮೇ 17ರಂದು ಪುನರಾರಂಭಗೊಳ್ಳಲಿದ್ದು, ಅನೇಕ ವಿದೇಶಿ ಆಟಗಾರರು ಭಾರತಕ್ಕೆ ಮರಳಬೇಕೆ ಅಥವಾ ಬೇಡವೇ ಎಂಬ ಗೊಂದಲದಲ್ಲಿರುವಂತೆ ಕಾಣುತ್ತಿದೆ. ಜಾಶ್ ಹೇಜಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಅವರಂತಹ ಆಟಗಾರರು ಐಪಿಎಲ್ ಉಳಿದ ಅವಧಿಗೆ ಭಾರತಕ್ಕೆ ಮರಳುವ ಸಾಧ್ಯತೆಯಿಲ್ಲ ಎಂದು ವರದಿಗಳು ಸೂಚಿಸಿವೆ. ಆದರೆ, ಇತರ ಕೆಲವು ಆಟಗಾರರು ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಈ ಮಧ್ಯೆ, ಟಿ20 ಲೀಗ್‌ನಲ್ಲಿ ಆಸ್ಟ್ರೇಲಿಯಾ ಆಟಗಾರರ ಭಾಗವಹಿಸುವಿಕೆಯ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಐಪಿಎಲ್ 2025 ಆವೃತ್ತಿಯು ಮೇ 25ರಂದು ಫೈನಲ್ ಪಂದ್ಯದೊಂದಿಗೆ ಮುಕ್ತಾಯಗೊಳ್ಳಬೇಕಿತ್ತು. ಆದರೆ, ಒಂದು ವಾರ ಪಂದ್ಯವನ್ನು ಸ್ಥಗಿತಗೊಳಿಸಿದ್ದರಿಂದ ಇದೀಗ ಮೇ 17ರಂದು ಆರಂಭವಾಗಿ ಜೂನ್ 03 ರಂದು ಫೈನಲ್ ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಕೇವಲ ಒಂದು ವಾರಕ್ಕೂ ಮುನ್ನ ಐಪಿಎಲ್ 18ನೇ ಆವೃತ್ತಿಯ ಟಿ20 ಲೀಗ್‌ನ ಫೈನಲ್ ನಡೆಯಲಿದೆ. ಹೀಗಾಗಿ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಈ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಐಪಿಎಲ್‌ಗಾಗಿ ಭಾರತಕ್ಕೆ ಮರಳುವ ಬಗ್ಗೆ ಆಟಗಾರರ ವೈಯಕ್ತಿಕ ಆಯ್ಕೆಯನ್ನು ಬೆಂಬಲಿಸುವುದಾಗಿ ಹೇಳಿದೆ. ಆದರೆ, ಐಪಿಎಲ್‌ನಲ್ಲಿ ಭಾಗವಹಿಸುವ ಮತ್ತು ಜೂನ್ 11 ರಂದು ನಡೆಯಲಿರುವ ಡಬ್ಲ್ಯುಟಿಸಿ ಫೈನಲ್‌ಗಾಗಿ ಆಸ್ಟ್ರೇಲಿಯಾ ತಂಡವನ್ನು ಸೇರಬೇಕಿರುವ ಆಟಗಾರರಿಗೆ ಕೆಲವು ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ ಎಂದಿದೆ.
'ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಮರಳಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಆಟಗಾರರು ನಿರ್ಧರಿಸಬಹುದು. ಅವರ ವೈಯಕ್ತಿಕ ನಿರ್ಧಾರಗಳಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಬೆಂಬಲ ನೀಡುತ್ತದೆ' ಎಂದು ಸಿಎ ಹೇಳಿಕೆಯಲ್ಲಿ ತಿಳಿಸಿದೆ.
ಉಳಿದ ಐಪಿಎಲ್ ಪಂದ್ಯಗಳಲ್ಲಿ ಆಡಲು ನಿರ್ಧರಿಸುವ ಆಟಗಾರರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಯಾರಿ ನಡೆಸಲು ಉಂಟಾಗುವ ಪರಿಣಾಮಗಳ ಕುರಿತು ತಂಡದ ಆಡಳಿತ ಮಂಡಳಿ ಕೆಲಸ ಮಾಡುತ್ತದೆ. ಭದ್ರತಾ ವ್ಯವಸ್ಥೆ ಮತ್ತು ಆಟಗಾರರ ಸುರಕ್ಷತೆ ಕುರಿತು ನಾವು ಆಸ್ಟ್ರೇಲಿಯಾ ಸರ್ಕಾರ ಮತ್ತು ಬಿಸಿಸಿಐ ಜೊತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಿದೆ.
ಐಪಿಎಲ್‌ನಲ್ಲಿ ಭಾಗವಹಿಸುವ ಆಸ್ಟ್ರೇಲಿಯಾದ ಆಟಗಾರರಲ್ಲಿ, ಜಾಶ್ ಹೇಜಲ್‌ವುಡ್ ಹೊರಗುಳಿಯುವುದು ಬಹುತೇಕ ಖಚಿತವಾಗಿದ್ದು, ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ ಮತ್ತು ಮಿಚ್ ಸ್ಟಾರ್ಕ್ ಅವರಂತಹ ಆಟಗಾರರು ಇನ್ನೂ ತಮ್ಮ ನಿರ್ಧಾರವನ್ನು ದೃಢಪಡಿಸಿಲ್ಲ. ಈಮಧ್ಯೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗಾಗಲೇ ಎಲ್ಲ ವಿದೇಶಿ ಆಟಗಾರರನ್ನು ಐಪಿಎಲ್‌ಗೆ ಮರಳುವಂತೆ ಕೇಳಿಕೊಳ್ಳುವಂತೆ ಫ್ರಾಂಚೈಸಿಗಳಿಗೆ ಸೂಚಿಸಿದೆ.
Advertisement