
ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದಾಗಿ ವಿರಾಟ್ ಕೊಹ್ಲಿ ಸೋಮವಾರ ಘೋಷಣೆ ಮಾಡಿದ್ದು, ಕ್ರಿಕೆಟ್ ಜಗತ್ತಿನಲ್ಲಿ ಅಲೆಗಳನ್ನು ಎಬ್ಬಿಸಿದೆ. ಕೊಹ್ಲಿ ಅವರ ಈ ನಿರ್ಧಾರಕ್ಕೆ ಅವರ ಮಾಜಿ ದೆಹಲಿ ಕೋಚ್ ಸರಣ್‌ದೀಪ್ ಸಿಂಗ್ ಅತ್ಯಂತ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನಿರ್ಣಾಯಕ ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನವೇ ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಿವೃತ್ತಿ ಘೋಷಿಸಿದ್ದು, ಆಘಾತಕ್ಕೆ ಕಾರಣವಾಗಿದೆ.
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಸರಣ್‌ದೀಪ್, ಕೊಹ್ಲಿ ನಿವೃತ್ತಿಯ ಬಗ್ಗೆ ಸುಳಿವು ನೀಡಿದ್ದರೇ ಎಂದು ಕೇಳಿದಾಗ 'ಇಲ್ಲ'. 'ಅವರು ರೆಡ್-ಬಾಲ್ ಕ್ರಿಕೆಟ್ (ರಣಜಿ ಟ್ರೋಫಿ) ಆಡಲು ಬಂದಿದ್ದರು. ಆ ಸಮಯದಲ್ಲಿ ಅವರಿಗೆ ಆ ರೀತಿಯ ಯಾವುದೇ ಆಲೋಚನೆ ಇರಲಿಲ್ಲ. ಆ ಸಮಯದಲ್ಲಿಯೂ ಸಹ, ಅವರು ಇಂಗ್ಲೆಂಡ್ ಸರಣಿಯ ಬಗ್ಗೆ ಮಾತನಾಡುತ್ತಿದ್ದರು ಮತ್ತು 2018ರಲ್ಲಿ ಮಾಡಿದಂತೆ ಗರಿಷ್ಠ ಶತಕಗಳನ್ನು ಗಳಿಸಲು ಬಯಸುತ್ತೇನೆ' ಎಂದಿದ್ದರು ಎಂದರು.
36 ವರ್ಷದ ಕೊಹ್ಲಿ ಈ ವರ್ಷದ ಆರಂಭದಲ್ಲಿ ದೆಹಲಿಯ ರಣಜಿ ತಂಡವನ್ನು ಮತ್ತೆ ಸೇರಿಕೊಂಡಿದ್ದರು. ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಂಡರು. ಇದನ್ನು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐದು ಟೆಸ್ಟ್ ಸರಣಿಗೆ ಸಿದ್ಧತೆಯಾಗಿಯೇ ಭಾವಿಸಲಾಗಿತ್ತು. ರಣಜಿ ಟ್ರೋಫಿಯಲ್ಲಿ ಕಾಣಿಸಿಕೊಂಡ ಕೊಹ್ಲಿಗೆ ಅಷ್ಟೇನು ಫಲಪ್ರದವಾಗದಿದ್ದರೂ, ಇನ್ನೂ ಅವರು ಟೆಸ್ಟ್ ಸ್ವರೂಪದ ಬಗ್ಗೆ ಹೆಚ್ಚು ಯೋಚಿಸುತ್ತಿದ್ದಾರೆ ಎಂಬ ಸಂದೇಶ ನೀಡಿತ್ತು.
'ನಾವೆಲ್ಲರೂ ಅವರು ಇಂಗ್ಲೆಂಡ್ ಪ್ರವಾಸದಲ್ಲಿ ಇರುತ್ತಾರೆ ಎಂದು ಭಾವಿಸಿದ್ದೆವು. ಅವರು ಅತ್ಯಂತ ಫಿಟ್ ಮತ್ತು ಹಿರಿಯ ಆಟಗಾರರಲ್ಲಿ ಒಬ್ಬರು. ವಿಶೇಷವಾಗಿ ಇಂಗ್ಲೆಂಡ್‌ನಲ್ಲಿ, ನಿಮಗೆ ಆ ರೀತಿಯ ಅನುಭವ ಬೇಕು. ಅವರಿಲ್ಲದೆ, ಈ ಭಾರತೀಯ ತಂಡ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ನನಗೆ ತಿಳಿದಿಲ್ಲ' ಎಂದು ಸರಣ್‌ದೀಪ್ ಹೇಳಿದರು.
ಕೊಹ್ಲಿ 123 ಟೆಸ್ಟ್‌ಗಳಲ್ಲಿ 9,230 ರನ್‌ಗಳನ್ನು ಗಳಿಸಿದ್ದಾರೆ. 68 ಪಂದ್ಯಗಳಲ್ಲಿ ನಾಯಕರಾಗಿದ್ದ ಅವರು 40 ಗೆಲುವುಗಳಲ್ಲಿ ತಂಡವನ್ನು ಮುನ್ನಡೆಸಿದ ದಾಖಲೆಯನ್ನು ಹೊಂದಿದ್ದಾರೆ. ಅವರ ಕೊನೆಯ ಸರಣಿ 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಯಾಗಿತ್ತು. ಒಂದು ಶ್ರೇಷ್ಠ ಸರಣಿಗೆ ಕೆಲವೇ ದಿನಗಳು ಬಾಕಿ ಇರುವಾಗ ಕೊಹ್ಲಿ ನಿವೃತ್ತಿ ಘೋಷಿಸಿದ್ದು, ಅನೇಕರಿಗೆ ತೀವ್ರ ಆಶ್ಚರ್ಯಕರವಾಗಿ ಪರಿಣಮಿಸಿದೆ. ವಿಶ್ವ ಕ್ರಿಕೆಟ್‌ನಲ್ಲಿ ಇನ್ನೂ ಅತ್ಯಂತ ಫಿಟ್ ಆಗಿರುವ ಆಟಗಾರ ದಿಢೀರ್ ನಿವೃತ್ತಿ ಘೋಷಿಸುವುದು, ಅಭಿಮಾನಿಗಳು ಮತ್ತು ಸಹೋದ್ಯೋಗಿಗಳಿಗೆ ಬಿಡಿಸಲಾರದ ಒಗಟಾಗಿದೆ. ಟೆಸ್ಟ್ ಕ್ರಿಕೆಟ್ ಖಂಡಿತವಾಗಿಯೂ ವಿರಾಟ್ ಕೊಹ್ಲಿ ಎಂಬ ನಿಗೂಢತೆಯನ್ನು ಕಳೆದುಕೊಳ್ಳುತ್ತದೆ!
Advertisement