
ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಕೆಲ ದಿನಗಳಿಂದ ಕೇಳಿಬರುತ್ತಿದ್ದ ಊಹಾಪೋಹಗಳಿಗೆ ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸೋಮವಾರ ತೆರೆ ಎಳೆದಿದ್ದರು. ವಿರಾಟ್ ಕೊಹ್ಲಿ 123 ಟೆಸ್ಟ್ ಪಂದ್ಯಗಳಲ್ಲಿ 46.85 ರ ಸರಾಸರಿಯಲ್ಲಿ 9230 ರನ್ ಗಳಿಸಿದ್ದಾರೆ. 2024ರ ಟಿ20 ವಿಶ್ವಕಪ್ ಗೆಲುವಿನ ನಂತರ ಅಂತರರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದ್ದ ವಿರಾಟ್ ಕೊಹ್ಲಿ ಇದೀಗ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡಲಿದ್ದಾರೆ.
ಮೇ 7ರಂದು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ವಿರಾಟ್ ಕೊಹ್ಲಿ ಕೂಡ ಅದೇ ದಿನ ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಲು ಬಯಸಿದ್ದರು. ಆದರೆ, 'ಆಪರೇಷನ್ ಸಿಂಧೂರ ಮತ್ತು ಪಾಕಿಸ್ತಾನದೊಂದಿಗಿನ ಮಿಲಿಟರಿ ಸಂಘರ್ಷದಿಂದಾಗಿ, ಕೊಹ್ಲಿ ತಮ್ಮ ನಿವೃತ್ತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲು ಕೆಲವು ದಿನ ಕಾಯುವಂತೆ BCCI ಸೂಚಿಸಿತ್ತು' ಎಂದು ತಿಳಿದುಬಂದಿದೆ.
ಶನಿವಾರ (ಮೇ 10) ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದ ನಂತರ, ಕೊಹ್ಲಿ ತಮ್ಮ ನಿರ್ಧಾರವನ್ನು ಬಹಿರಂಗಪಡಿಸುವುದಾಗಿ ಬಿಸಿಸಿಐ ಮತ್ತು ಆಯ್ಕೆದಾರರಿಗೆ ತಿಳಿಸಿದ್ದರು. ಬಳಿಕ ಸೋಮವಾರ ಟೆಸ್ಟ್‌ನಿಂದ ನಿವೃತ್ತಿ ಘೋಷಿಸಿದ್ದರು. ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವ ಕಾರಣಕ್ಕಾಗಿ ಕೊಹ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಕಳೆದ ಒಂದು ವರ್ಷದಲ್ಲಿ, ಕೊಹ್ಲಿ ತಮ್ಮ ಪತ್ನಿ ಮತ್ತು ನಟಿ ಅನುಷ್ಕಾ ಶರ್ಮಾ, ಮಗಳು ವಮಿಕಾ ಮತ್ತು ಮಗ ಅಕಾಯ್ ಜೊತೆಗಿರಲು ಆಗಾಗ್ಗೆ ಇಂಗ್ಲೆಂಡ್‌ಗೆ ಹಾರಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 1-3 ಅಂತರದಿಂದ ಸೋಲು ಕಂಡ ನಂತರ, ಬಿಸಿಸಿಐ ಕುಟುಂಬ ಸದಸ್ಯರು ತಂಡದ ಆಟಗಾರರೊಂದಿಗೆ ಇರುವುದಕ್ಕೆ ನಿರ್ಬಂಧ ವಿಧಿಸಿತ್ತು. ಕೊಹ್ಲಿ ಈ ನಿರ್ಧಾರದಿಂದ ಅಸಮಾಧಾನಗೊಂಡಿದ್ದರು.
'ಕುಟುಂಬದ ಪಾತ್ರವನ್ನು ಜನರಿಗೆ ವಿವರಿಸುವುದು ತುಂಬಾ ಕಷ್ಟ. ಹೊರಗೆ ಏನಾದರೂ ತೀವ್ರವಾದ ಘಟನೆಗಳು ನಡೆದಾಗಲೆಲ್ಲಾ ನಿಮ್ಮ ಕುಟುಂಬದೊಂದಿಗೆ ಇರುವುದು ಎಷ್ಟು ಸಮಾಧಾನಕರ ಎಂಬುದನ್ನು ಹೇಳಲು ಸಾಧ್ಯವಿಲ್ಲ' ಎಂದು ಕೊಹ್ಲಿ 2025ರ ಐಪಿಎಲ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
'ಕುಟುಂಬದೊಂದಿಗೆ ಇರುವುದು ಎಷ್ಟು ಮೌಲ್ಯಯುತವಾಗಿದೆ ಎಂಬುದರ ಬಗ್ಗೆ ಜನರಿಗೆ ತಿಳಿವಳಿಕೆ ಇದೆ ಎಂದು ನಾನು ಭಾವಿಸುವುದಿಲ್ಲ. ನಾನು ನನ್ನ ಕೋಣೆಗೆ ಹೋಗಿ ಒಂಟಿಯಾಗಿ ಕುಳಿತು ದುಃಖಿಸಲು ಬಯಸುವುದಿಲ್ಲ. ನಾನು ಸಾಮಾನ್ಯವಾಗಿರಲು ಬಯಸುತ್ತೇನೆ. ಆಗ ನೀವು ನಿಜವಾಗಿಯೂ ನಿಮ್ಮ ಆಟವನ್ನು ಒಂದು ಜವಾಬ್ದಾರಿ ಎಂದು ಪರಿಗಣಿಸಬಹುದು. ನಿಮ್ಮ ಬದ್ಧತೆಯನ್ನು ಪೂರ್ಣಗೊಳಿಸಿದ ನಂತರ ನೀವು ಮತ್ತೆ ಮನೆಗೆ ಹಿಂತಿರುಗುವಿರಿ. ನೀವು ಕುಟುಂಬದೊಂದಿಗೆ ಮತ್ತು ನಿಮ್ಮ ಮನೆಯಲ್ಲಿ ಸಂಪೂರ್ಣ ಸಾಮಾನ್ಯರಾಗಿ ಇರುತ್ತೀರಿ. ಅದು ಹಾಗೆ ಮುಂದುವರಿಯುತ್ತದೆ' ಎಂದಿದ್ದರು.
Advertisement