ಐಪಿಎಲ್ 2025ನೇ ಆವೃತ್ತಿಯಲ್ಲಿ ಪ್ಲೇಆಫ್ ಕನಸು ಕಾಣುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಂತಾಗಿದೆ. ಪ್ರಮುಖ ಆಟಗಾಕ ಮಿಚೆಲ್ ಸ್ಟಾರ್ಕ್ ಟೂರ್ನಿಯ ಉಳಿದ ಪಂದ್ಯಗಳಿಂದ ಹೊರಗುಳಿಯುವುದಾಗಿ ಹೇಳಿದ ನಂತರ, ಇದೀಗ ತಂಡದ ಉಪನಾಯಕ ಫಾಫ್ ಡು ಪ್ಲೆಸಿಸ್ ಕೂಡ ಹಿಂದೆ ಸರಿದಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಮೇ 8ರಂದು ಐಪಿಎಲ್ ಅನ್ನು ಸ್ಥಗಿತಗೊಳಿಸಲಾಯಿತು. ಇದೀಗ ಮೇ 17ರಂದು ಪಂದ್ಯಾವಳಿ ಪುನರಾರಂಭಗೊಳ್ಳಲಿದೆ.
ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ ಐದನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇಬ್ಬರು ಪ್ರಮುಖ ಆಟಗಾರರಿಲ್ಲದೆ ಸಂಕಷ್ಟದಲ್ಲಿದೆ. ಇಎಸ್‌ಪಿಎನ್ ಕ್ರಿಕ್‌ಇನ್ಫೊ ವರದಿ ಪ್ರಕಾರ, ಇಬ್ಬರು ದಕ್ಷಿಣ ಆಫ್ರಿಕನ್ನರಾದ ಫಾಫ್ ಮತ್ತು ಡೊನೊವನ್ ಫೆರೇರಾ ಟೂರ್ನಿಯಿಂದ ಹಿಂದೆ ಉಳಿಯಲು ನಿರ್ಧರಿಸಿದ್ದಾರೆ. ಫಾಫ್ ಈಗಾಗಲೇ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದರು ಮತ್ತು ಈ ಆವೃತ್ತಿಯಲ್ಲಿ ಕೇವಲ ಆರು ಪಂದ್ಯಗಳನ್ನು ಮಾತ್ರ ಆಡಿದ್ದರು ಎಂಬುದು ಗಮನಾರ್ಹ.
ಫಾಫ್ ಆಡಿರುವ ಆರು ಇನಿಂಗ್ಸ್‌ಗಳಲ್ಲಿ ಎರಡು ಅರ್ಧಶತಕಗಳು ಸೇರಿದಂತೆ 128 ರ ಸ್ಟ್ರೈಕ್-ರೇಟ್‌ನಲ್ಲಿ 128 ರನ್ ಗಳಿಸಿದ್ದಾರೆ. ಇದಕ್ಕೂ ಮೊದಲು, ಜೇಕ್ ಫ್ರೇಸರ್ ಮೆಕ್‌ಗುರ್ಕ್ ಕೂಡ ಪಂದ್ಯಾವಳಿಯಿಂದ ಹೊರಗುಳಿದಿದ್ದರು. ಅವರ ಬದಲಿಗೆ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡ ಕರೆತರಲು ನಿರ್ಧರಿಸಿತ್ತು. ಮುಸ್ತಾಫಿಜುರ್ ಇದೀಗ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಇಂದ NOC ಪಡೆದಿದ್ದು, ಡೆಸಿ ಪರವಾಗಿ ಕಣಕ್ಕಿಳಿಯಲಿದ್ದಾರೆ. ಸದ್ಯ ಅವರು T20I ಸರಣಿಗಾಗಿ UAE ನಲ್ಲಿದ್ದಾರೆ.
ಟ್ರಿಸ್ಟಾನ್ ಸ್ಟಬ್ಸ್ ಲೀಗ್ ಹಂತಗಳಿಗೆ ಮಾತ್ರ ಲಭ್ಯವಿರಲಿದ್ದು, ನಂತರ WTC ಫೈನಲ್‌ಗಾಗಿ ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್ ಅನ್ನು ಒಂದು ವಾರ ಸ್ಥಗಿತಗೊಳಿಸಿದ ವೇಳೆ ಎಲ್ಲ ಫ್ರಾಂಚೈಸಿಗಳ ವಿದೇಶಿ ಆಟಗಾರರು ತಮ್ಮ ತವರು ರಾಷ್ಟ್ರಗಳಿಗೆ ಮರಳಿದ್ದರು. ಇದೀಗ ಹಲವು ತಂಡಗಳ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದು, ಈ ಪೈಕಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹೆಚ್ಚಿನ ಹೊಡೆತ ಬಿದ್ದಿದೆ.
Advertisement