ಮೆಲ್ಬೋರ್ನ್: ಈಗಾಗಲೇ ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಕ್ಕೆ ಮತ್ತೊಂದು ಹೊಸ ತಲೆನೋವು ಆರಂಭವಾಗಿದೆ. ಪ್ಲೇಆಫ್ ಕನಸು ಕಾಣುತ್ತಿದ್ದ ಡೆಲ್ಲಿಗೆ ಹಿನ್ನಡೆ ಉಂಟಾಗಿದ್ದು, ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಐಪಿಎಲ್‌ನ ಉಳಿದ ಪಂದ್ಯಗಳಿಗೆ ಭಾರತಕ್ಕೆ ಮರಳದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
'ಆಸ್ಟ್ರೇಲಿಯನ್ ಅಸೋಸಿಯೇಟೆಡ್ ಪ್ರೆಸ್' ಪ್ರಕಾರ, ಮಿಚೆಲ್ ಸ್ಟಾರ್ಕ್ ಅವರು ಭಾರತಕ್ಕೆ ಹಿಂದಿರುಗುವುದಿಲ್ಲ ಎಂದು ಫ್ರಾಂಚೈಸಿಗೆ ಸ್ಪಷ್ಟಪಡಿಸಿರುವುದಾಗಿ ತಿಳಿಸಲಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಬಳಿಕ ಐಪಿಎಲ್ ಅನ್ನು ಒಂದು ವಾರ ಸ್ಥಗಿತಗೊಳಿಸಲಾಯಿತು. ಭಾರತ ಮತ್ತು ಪಾಕ್ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ ಬಳಿಕ ಐಪಿಎಲ್ ಪುನರಾರಂಭಕ್ಕೆ ಬಿಸಿಸಿಐ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಮೇ 17ರಂದು ಟೂರ್ನಿ ಮತ್ತೆ ಆರಂಭಗೊಳ್ಳಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಟಾರ್ಕ್, ಈ ಆವೃತ್ತಿಯಲ್ಲಿ 11 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಪಡೆಯುವ ಮೂಲಕ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಸ್ಟಾರ್ಕ್ ಅವರ ಅನುಪಸ್ಥಿತಿಯು ಪ್ಲೇಆಫ್‌ಗೆ ಪ್ರವೇಶಿಸಲು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹೊಡೆತ ಬೀಳಲಿದೆ.
ಫಾಫ್ ಡು ಪ್ಲೆಸಿಸ್ ಡಿಸಿಗೆ ಮರಳುತ್ತಾರೆಯೇ ಎಂಬ ಬಗ್ಗೆ ಇನ್ನೂ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ. ಆದರೆ, ಟ್ರಿಸ್ಟಾನ್ ಸ್ಟಬ್ಸ್ ಅವರು ತಂಡವನ್ನು ಮತ್ತೆ ಸೇರಿಕೊಳ್ಳುತ್ತಿದ್ದು, ಉಳಿದ ಲೀಗ್ ಹಂತದ ಪಂದ್ಯಗಳಿಗೆ ಮಾತ್ರ ಲಭ್ಯವಿರಲಿದ್ದಾರೆ. ನಂತರ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ಹೊರಡಲಿದ್ದಾರೆ ಎಂದು ಹೇಳಿದ್ದಾರೆ.
ಜೇಕ್ ಫ್ರೇಸರ್-ಮೆಕ್‌ಗುರ್ಕ್ ಈಗಾಗಲೇ ಭಾರತಕ್ಕೆ ಹಿಂತಿರುಗುತ್ತಿಲ್ಲ ಎಂಬುದು ದೃಢಪಟ್ಟಿದ್ದು, ಅವರ ಬದಲಿಗೆ ಡೆಲ್ಲಿ ತಂಡ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕರೆತರಲು ಮುಂದಾಗಿದೆ.
Advertisement