
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಉತ್ತಮ ಪ್ರದರ್ಶನ ನೀಡುತ್ತಾ ಸಾಗಿದ್ದು, ಪ್ಲೇಆಫ್‌ಗೆ ತಲುಪಲು ಇನ್ನೊಂದು ಹೆಜ್ಜೆ ಬಾಕಿಯಿದೆ. RCB ಪ್ಲೇಆಫ್ ತಲುಪಲು ಕೇವಲ ಇನ್ನೊಂದು ಪಂದ್ಯ ಗೆಲ್ಲಬೇಕಿದೆ. ಆರ್‌ಸಿಬಿ ಸದ್ಯ ಲೀಗ್ ಹಂತದಲ್ಲಿ ಇನ್ನೆರಡು ಪಂದ್ಯಗಳನ್ನು ಆಡಬೇಕಿದೆ.
ಈ ಬಾರಿ ನಡೆದ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಉತ್ತಮ ತಂಡವನ್ನು ಕಟ್ಟಿದ್ದು, ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಉತ್ತಮವಾಗಿದೆ. ಬೌಲಿಂಗ್‌ನಲ್ಲಿ ಜಾಶ್ ಹೇಜಲ್‌ವುಡ್, ಕೃನಾಲ್ ಪಾಂಡ್ಯ, ಯಶ್ ದಯಾಳ್, ಸುಯಾಶ್ ಶರ್ಮಾ ಮತ್ತು ಭುವನೇಶ್ವರ್ ಕುಮಾರ್ ಅವರಂತಹ ಆಟಗಾರರು ಆರ್‌ಸಿಬಿಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಸದ್ಯ ಆರ್‌ಸಿಬಿ 11 ಪಂದ್ಯಗಳನ್ನು ಆಡಿದ್ದು, 8ರಲ್ಲಿ ಗೆಲುವು ಸಾಧಿಸಿದೆ. ಮೇ. 17ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆಯಬೇಕಿದ್ದ ಪಂದ್ಯ ಮಳೆಯಿಂದ ರದ್ದಾಗಿದ್ದು, ಉಭಯ ತಂಡಳು ತಲಾ ಒಂದೊಂದು ಅಂಕವನ್ನು ಹಂಚಿಕೊಂಡಿವೆ.
ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್ ಮತ್ತು ಟಿಮ್ ಡೇವಿಡ್ ಅವರಂತಹ ಅತ್ಯುತ್ತಮ ಬ್ಯಾಟರ್‌ಗಳಿದ್ದಾರೆ. ಜೂನ್ 3ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಟ್ರೋಫಿ ಎತ್ತಿ ಹಿಡಿಯುವ ಎಲ್ಲ ಸಾಧ್ಯತೆ ಇದೆ.
ಆರ್‌ಸಿಬಿ ಫೈನಲ್‌ಗೆ ತಲುಪಿದರೆ, ತಾನು ಕ್ರೀಡಾಂಗಣದಲ್ಲಿ ಇರುತ್ತೇನೆ ಎಂದು ಎಬಿಡಿ ತಿಳಿಸಿದ್ದಾರೆ. 2008 ರಿಂದ 2010ರವರೆಗೆ ಡೆಲ್ಲಿ ಡೇರ್‌ಡೆವಿಲ್ಸ್ ಪರ ಆಡಿದ್ದರೂ, ಆರ್‌ಸಿಬಿ ಅವರ ನೆಚ್ಚಿನ ತಂಡ. ದಕ್ಷಿಣ ಆಫ್ರಿಕಾದ ಮಾಜಿ ದಂತಕಥೆ, ತಾವು ವೇದಿಕೆಗೆ ಬಂದು ವಿರಾಟ್ ಕೊಹ್ಲಿಯೊಂದಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯುತ್ತೇನೆ ಎಂದಿದ್ದಾರೆ.
'ಆರ್‌ಸಿಬಿ (ಐಪಿಎಲ್) ಫೈನಲ್‌ಗೆ ತಲುಪಿದರೆ, ನಾನು ಕ್ರೀಡಾಂಗಣದಲ್ಲಿ ಇರುತ್ತೇನೆ. ವಿರಾಟ್ ಕೊಹ್ಲಿ ಜೊತೆ ಆ ಟ್ರೋಫಿಯನ್ನು ಎತ್ತಿ ಹಿಡಿಯುವುದಕ್ಕಿಂತ ಹೆಚ್ಚಿನ ಸಂತೋಷ ಬೇರೋಂದಿಲ್ಲ. ನಾವು (ಆರ್‌ಸಿಬಿ) ಹಲವು ವರ್ಷಗಳಿಂದ ಅದನ್ನು ಪ್ರಯತ್ನಿಸುತ್ತಿದ್ದೇವೆ' ಎಂದು ಎಬಿಡಿ ಹೇಳಿದರು.
Advertisement