
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಸೀಸನ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೊರಹೋಗುವ ಹಂತದಲ್ಲಿದೆ. ಅಗ್ರ 4ರಲ್ಲಿ ಸ್ಥಾನ ಪಡೆಯಲು ಫ್ರಾಂಚೈಸಿ ತನ್ನ ಉಳಿದ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಮುಂದಿನ ಒಂದು ಪಂದ್ಯದಲ್ಲಿ ಸೋಲು ಕಂಡರೂ ಅಕ್ಷರ್ ಪಟೇಲ್ ನೇತೃತ್ವದ ತಂಡಕ್ಕೆ ಮುಂದಿನ ಸುತ್ತಿಗೆ ಅರ್ಹತೆ ಪಡೆಯುವುದು ತುಂಬಾ ಕಷ್ಟವಾಗಲಿದೆ. ಬುಧವಾರ ಮುಂಬೈ ಇಂಡಿಯನ್ಸ್ (MI) ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಮಳೆ ಅಡ್ಡಿ ಉಂಟುಮಾಡುವ ನಿರೀಕ್ಷೆಯಿರುವುದರಿಂದ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇದೀಗ ಆತಂಕ ಶುರುವಾಗಿದೆ.
ಮುಂದಿನ ನಾಲ್ಕು ದಿನಗಳವರೆಗೆ ಮುಂಬೈನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅಕ್ಯೂವೆದರ್ ಪ್ರಕಾರ, ನಗರದಲ್ಲಿ ಮಳೆಯಾಗುವ ಸಾಧ್ಯತೆ ಶೇ 80 ರಷ್ಟು ಇದ್ದು, ಒಟ್ಟು 1.5 ಗಂಟೆಗಳ ಮಳೆಯಾಗುವ ನಿರೀಕ್ಷೆಯಿದೆ. ರಾತ್ರಿಯ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಶೇ 25ಕ್ಕೆ ಇಳಿಯಲಿದ್ದರೂ, ಹವಾಮಾನ ಪರಿಸ್ಥಿತಿಗಳು ಯಾವ ಕ್ಷಣದಲ್ಲಿ ಬೇಕಾದರೂ ಬದಲಾಗುವ ಸಾಧ್ಯತೆ ಇದೆ.
MI vs DC ಪಂದ್ಯ ರದ್ದಾದರೆ ಏನಾಗುತ್ತದೆ?
ಮುಂಬೈ ಮತ್ತು ಡಿಸಿ ನಡುವಿನ ಪಂದ್ಯ ಮಳೆಯಿಂದ ರದ್ದಾದರೆ, ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಪ್ಲೇಆಫ್‌ಗೆ ಹತ್ತಿರವಾಗಲಿದೆ. ಮುಂಬೈ ಈಗಾಗಲೇ ಅಂಕ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗಿಂತ ಒಂದು ಪಾಯಿಂಟ್ ಮುಂದಿದೆ. ಇಂದು ನಡೆಯಲಿರುವ ಪಂದ್ಯ ಮಳೆಯಿಂದ ರದ್ದಾದರೆ, ಎರಡೂ ತಂಡಗಳು ತಲಾ ಒಂದು ಪಾಯಿಂಟ್ ಪಡೆಯುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಮುಂಬೈನ 15 ಅಂಕಗಳಿಗೆ ಏರಿದರೆ, ಡೆಲ್ಲಿ 14 ಅಂಕ ಪಡೆದಂತಾಗುತ್ತದೆ.
MI ಮತ್ತು DC ಎರಡೂ ತಂಡಗಳು ಈ ಆವೃತ್ತಿಯ ಲೀಗ್ ಹಂತದ ಕೊನೆಯ ಪಂದ್ಯವನ್ನು ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಆಡಲಿವೆ. ಪಂಜಾಬ್ ತಂಡ ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. MI vs DC ಪಂದ್ಯವು ಮಳೆಯಿಂದ ರದ್ದಾದರೆ, ಡೆಲ್ಲಿ ತಂಡವು PBKS ಮತ್ತು MI ನಡುವಿನ ಪಂದ್ಯದ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ. ಪಂಜಾಬ್ ವಿರುದ್ಧ ಎಂಐ ಸೋತು, ಡೆಲ್ಲಿ ಗೆದ್ದರೆ ಪ್ಲೇಆಫ್ ಸ್ಥಾನ ಪಡೆಯಬಹುದಾಗಿದೆ.
ಒಂದು ವೇಳೆ MI ತಂಡವು PBKS ಅನ್ನು ಸೋಲಿಸಿದರೆ, ಡೆಲ್ಲಿ ತಂಡವು ಪಂಜಾಬ್ ಮತ್ತು ದೆಹಲಿ ನಡುವಿನ ಪಂದ್ಯದ ಫಲಿತಾಂಶ ಏನೇ ಆಗಿದ್ದರೂ, ಪ್ಲೇಆಫ್ ರೇಸ್‌ನಿಂದ ಹೊರಬೀಳುತ್ತದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇಆಫ್‌ಗೆ ಹೇಗೆ ಅರ್ಹತೆ ಪಡೆಯಬಹುದು?
ಮುಂಬೈ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದರೆ, ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಸೋತರೆ ಮಾತ್ರ ಡೆಲ್ಲಿ ತಂಡವು ಮೊದಲ ನಾಲ್ಕು ಸ್ಥಾನಗಳಲ್ಲಿ ಸ್ಥಾನ ಪಡೆಯಬಹುದಾಗಿದೆ. ಹೀಗಾಗಿ, ಮಳೆಯಿಂದ ಪಂದ್ಯ ರದ್ದಾದರೂ, ಪಂಜಾಬ್ ಮತ್ತು ಮುಂಬೈ ನಡುವಿನ ಪಂದ್ಯವು ಅನುಕೂಲಕರ ಫಲಿತಾಂಶ ನೀಡಲಿ ಎಂದು ಡಿಸಿ ಆಶಿಸುತ್ತದೆ.
Advertisement