
ಅಹ್ಮದಾಬಾದ್: ಹಾಲಿ ಐಪಿಎಲ್ ಕಳಪೆ ಪ್ರದರ್ಶನದ ಮೂಲಕ ಅಭಿಮಾನಿಗಳ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಿವೃತ್ತಿ ಕುರಿತು ಸುಳಿವು ನೀಡಿದ್ದಾರೆ ಎನ್ನಲಾಗುತ್ತಿದೆ.
ಇಂದು ಅಹ್ಮದಾಬಾದ್ ನಲ್ಲಿ ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 83 ರನ್ ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು ಆ ಮೂಲಕ ಟೂರ್ನಿಯ ತಮ್ಮ ಅಂತಿಮ ಪಂದ್ಯದಲ್ಲಿ ಗೆಲುವಿನೊಂದಿಗೆ ಜರ್ನಿ ಅಂತ್ಯಗೊಳಿಸಿದೆ.
ಈ ಪಂದ್ಯದ ಟಾಸ್ ವೇಳೆ ಮಾತನಾಡಿದ್ದ ನಾಯಕ ಮಹೇಂದ್ರ ಸಿಂಗ್ ಧೋನಿ, 'ವಯಸ್ಸು ಮತ್ತು ಫಿಟ್‌ನೆಸ್ ದೊಡ್ಡ ಸವಾಲುಗಳಾಗಿದ್ದು, ತಮ್ಮ ದೇಹದ ಸ್ಥಿತಿಯನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಧೋನಿ ಅವರ ಈ ಹೇಳಿಕೆ ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದ್ದು, ಧೋನಿ ನೀಡಿರುವ ಹೇಳಿಕೆ ಅವರು ಮುಂದಿನ ಸೀಸನ್ ಆಡುವ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ನಿವೃತ್ತಿ ಸುಳಿವು ಕೊಟ್ಟ MS Dhoni?
ಗುಜರಾತ್ ಟೈಟನ್ಸ್ ವಿರುದ್ಧದ ಸಿಎಸ್‌ಕೆ ಕೊನೆಯ ಲೀಗ್ ಪಂದ್ಯಕ್ಕೂ ಮುನ್ನ ನಡೆದ ಟಾಸ್ ಸಮಯದಲ್ಲಿ, ನಿರೂಪಕ ರವಿಶಾಸ್ತ್ರಿ, ಧೋನಿಗೆ, ‘ನೀವು 18 ವರ್ಷಗಳಿಂದ ಐಪಿಎಲ್‌ನಲ್ಲಿ ಆಡುತ್ತಿದ್ದೀರಿ, ನಿಮ್ಮ ದೇಹವು ಈಗ ಹೇಗೆ ವರ್ತಿಸುತ್ತಿದೆ?’ ಎಂದು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಧೋನಿ, ದೇಹವು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಪ್ರತಿ ವರ್ಷವೂ ಹೊಸ ಸವಾಲನ್ನು ತರುತ್ತದೆ. ನಿಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದಾಗ, ದೇಹವನ್ನು ಗೌರವಿಸಬೇಕು. ಇದಕ್ಕೆ ಸಾಕಷ್ಟು ನಿರ್ವಹಣೆ ಅಗತ್ಯವಿರುತ್ತದೆ. ನಾನು ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾಗ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಲಿಲ್ಲ. ಇಷ್ಟು ವರ್ಷಗಳ ಕಾಲ ನನ್ನನ್ನು ಫಿಟ್ ಆಗಿಡಲು ಸಹಾಯ ಮಾಡಿದ ನನ್ನ ಸಹಾಯಕ ಸಿಬ್ಬಂದಿಗೆ ನಾನು ಕೃತಜ್ಞನಾಗಿದ್ದೇನೆ ಎಂದರು.
ಪಂದ್ಯ ಮುಕ್ತಾಯದ ಬಳಿಕ ಧೋನಿ ಹೇಳಿದ್ದೇನು?
ಇದೇ ರೀತಿಯ ಅಭಿಪ್ರಾಯವನ್ನು ಧೋನಿ ಪಂದ್ಯ ಮುಕ್ತಾಯದ ಬಳಿಕವೂ ಹೇಳಿದ್ದು, ಹರ್ಷ ಬೋಗ್ಲೆ ಜೊತೆ ಮಾತನಾಡಿದ್ದ ಧೋನಿ, 'ನನಗೆ ನಿರ್ಧರಿಸಲು 4-5 ತಿಂಗಳುಗಳಿವೆ, ಆತುರವಿಲ್ಲ. ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕು. ನೀವು ನಿಮ್ಮ ಅತ್ಯುತ್ತಮ ಸ್ಥಿತಿಯಲ್ಲಿರಬೇಕು. ಕ್ರಿಕೆಟಿಗರು ತಮ್ಮ ಪ್ರದರ್ಶನಕ್ಕಾಗಿ ನಿವೃತ್ತಿ ಹೊಂದಲು ಪ್ರಾರಂಭಿಸಿದರೆ, ಅವರಲ್ಲಿ ಕೆಲವರು 22 ವರ್ಷಕ್ಕೆ ನಿವೃತ್ತರಾಗುತ್ತಾರೆ. ರಾಂಚಿಗೆ ಹಿಂತಿರುಗುತ್ತೇನೆ, ಕೆಲವು ಬೈಕ್ ಸವಾರಿಗಳನ್ನು ಆನಂದಿಸುತ್ತೇನೆ ಎಂದರು.
ಮುಗಿದಿದೆ ಎಂದು ಹೇಳುತ್ತಿಲ್ಲ..ಆದರೆ ನಿರ್ಧರಿಸಿಲ್ಲ
ಇದೇ ವೇಳೆ ತಮ್ಮ ಮಾತಿಗೆ ಟ್ವಿಸ್ಟ್ ನೀಡಿದ ಧೋನಿ, ಇಷ್ಟಕ್ಕೇ ನಾನು ಮುಗಿಸಿದ್ದೇನೆ ಎಂದು ನಾನು ಹೇಳುತ್ತಿಲ್ಲ, ನಾನು ಹಿಂತಿರುಗುತ್ತೇನೆ ಎಂದೂ ಹೇಳುತ್ತಿಲ್ಲ. ನನಗೆ ಸಮಯದ ಐಷಾರಾಮಿ ಇದೆ. ಅದರ ಬಗ್ಗೆ ಯೋಚಿಸಿ ನಂತರ ನಿರ್ಧರಿಸುತ್ತೇನೆ ಎಂದರು.
ವಯಸ್ಸಾದಂತೆ ಭಾಸವಾಯಿತು
ಇದೇ ವೇಳೆ ಸೂರ್ಯವಂಶಿ ಕಾಲು ಮುಟ್ಟಿ ನಮಸ್ಕರಿಸಿದ ಕುರಿತು ಹರ್ಷ ಬೋಗ್ಲೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಧೋನಿ, ಇಂತಹ ಸಂರ್ಭಗಳಲ್ಲಿ ನನಗೆ ದಿಢೀರ್ ವಯಸ್ಸಾದಂತೆ ಭಾಸವಾಯಿತು. ನಾನು ಕೊನೆಯ ಸೀಟಿನಲ್ಲಿ ಕುಳಿತುಕೊಳ್ಳುತ್ತೇನೆ ಮತ್ತು ಅವನು ನನ್ನ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. ಅವನು ನನಗಿಂತ ನಿಖರವಾಗಿ 25 ವರ್ಷ ಚಿಕ್ಕವನು, ಅದು ನನಗೆ ವಯಸ್ಸಾದಂತೆ ಭಾಸವಾಗುತ್ತದೆ ಎಂದು ಹೇಳಿದರು.
Advertisement