
ಭಾನುವಾರ ನಡೆದ ಗುಜರಾತ್ ಟೈಟಾನ್ಸ್ (GT) ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (CSK) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆವೃತ್ತಿಯಲ್ಲಿ ಅಭಿಯಾನವನ್ನು ಪೂರ್ಣಗೊಳಿಸಿದ್ದು, ಪಂದ್ಯದ ವೇಳೆ ಸುರೇಶ್ ರೈನಾ ತಮ್ಮ ಭವಿಷ್ಯದ ಕುರಿತು ದೊಡ್ಡ ಸುಳಿವು ನೀಡಿದ್ದಾರೆ. ಸುರೇಶ್ ರೈನಾ ಐಪಿಎಲ್‌ನಲ್ಲಿ ತಮ್ಮ ಬಹುಪಾಲು ವೃತ್ತಿಜೀವನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದಾರೆ. ಮುಂಬರುವ ಆವೃತ್ತಿಗೆ ಮುಂಚಿತವಾಗಿ ಬ್ಯಾಟಿಂಗ್ ಕೋಚ್ ಆಗಿ ತಂಡಕ್ಕೆ ಸೇರುವ ಸುಳಿವು ನೀಡಿದ್ದಾರೆ. ಈ ವದಂತಿ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಫ್ರಾಂಚೈಸಿಯ ಈ ಆವೃತ್ತಿಯ ಅಂತ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದಾಗ ಸಿಎಸ್‌ಕೆ ಬೌಲಿಂಗ್ ಕೋಚ್ ಶ್ರೀಧರನ್ ಶ್ರೀರಾಮ್ ಈ ಬಗ್ಗೆ ಪ್ರತಿಕ್ರಿಯಿಸಿ, ಮೊದಲು ರೈನಾ ಅವರೊಂದಿಗೆ ಮಾತನಾಡಬೇಕು ಮತ್ತು ಈ ರೀತಿಯಾಗಿ ಏನಾದರೂ ಹೇಳಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
'ನನಗೆ ಗೊತ್ತಿಲ್ಲ. ಅವರು ಹಾಗೆ ಹೇಳಿದ್ದಾರಾ ಎಂದು ನಾನು ಅವರನ್ನೇ ಕೇಳಬೇಕು' ಎಂದು ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಸಿಎಸ್‌ಕೆ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ್ ಹೇಳಿದರು.
ಕಾಮೆಂಟರಿ ಬಾಕ್ಸ್‌ನಲ್ಲಿ, ಸುರೇಶ್ ರೈನಾ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹೊಸ ಬ್ಯಾಟಿಂಗ್ ಕೋಚ್‌ಗಾಗಿ ಹುಡುಕಾಟದಲ್ಲಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಸಹ ಕಮೆಂಟೇಟರ್ ಆಕಾಶ್ ಚೋಪ್ರಾ, ಹೊಸ ಕೋಚ್ ಹೆಸರು ಎಸ್‌ನಿಂದ ಆರಂಭವಾಗುತ್ತದೆಯೇ ಎಂದು ಪ್ರಶ್ನಿಸಿದ್ದರು.
ಸಂಭಾಷಣೆ ವೇಳೆ ಸುರೇಶ್ ರೈನಾ, ಶೀಘ್ರದಲ್ಲೇ ಫ್ರಾಂಚೈಸಿಯ ಬ್ಯಾಟಿಂಗ್ ಕೋಚ್ ಆಗಲಿರುವವರು CSK ಪರ ಅತ್ಯಂತ ವೇಗದ ಐಪಿಎಲ್ ಅರ್ಧಶತಕ ಬಾರಿಸಿದ್ದಾರೆ ಎಂಬ ಸುಳಿವು ನೀಡಿದರು. ಸದ್ಯ ಆಸ್ಟ್ರೇಲಿಯಾದ ಮೈಕೆಲ್ ಹಸ್ಸಿ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದಾರೆ.
ಸಿಎಸ್‌ಕೆ ಪಾಲಿಗೆ 18ನೇ ಆವೃತ್ತಿಯ ನಿರಾಶಾದಾಯಕವಾಗಿದ್ದು, ತಂಡದಲ್ಲಿ ದೊಡ್ಡ ದೊಡ್ಡ ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬೆನ್ನಲ್ಲೇ ಶ್ರೀರಾಮ್, 'ನಿಜವಾಗಿಯೂ ಏನಾಗಲಿದೆ ಎಂದು ತಿಳಿದಿಲ್ಲ. ಸ್ಟೀಫನ್ ಫ್ಲೆಮಿಂಗ್, ಎಂಎಸ್ ಧೋನಿ ಮತ್ತು ರುತುರಾಜ್ ಗಾಯಕ್ವಾಡ್ ತಂಡಕ್ಕೆ ಒಳ್ಳೆಯ ಅಂಶ ಎಂದು ನಾನು ಭಾವಿಸುತ್ತೇನೆ. ಏನು ತಪ್ಪಾಗಿದೆ ಮತ್ತು ಏನು ಮಾಡಬೇಕೆಂಬುದರ ಬಗ್ಗೆ ಅವರಿಗೆ ಸ್ಪಷ್ಟವಾದ ಕಲ್ಪನೆ ಇದೆ. ಆದ್ದರಿಂದ ಮುಂದಿನ ಹಾದಿ ಸಾಕಷ್ಟು ಸ್ಪಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ನಿಜವಾಗಿಯೂ ಸಕಾರಾತ್ಮಕವಾಗಿದೆ ಎಂದು ನಾನು ಭಾವಿಸುತ್ತೇನೆ' ಎಂದರು.
Advertisement