
ಚಂಡಿಗಢ: ಹಾಲಿ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ ಐಸಿಹಾಸಿಕ ಸಾಧನೆಗೆ ಪಾತ್ರರಾಗಿದ್ದಾರೆ.
ಚಂಡೀಗಢದ ಮುಲ್ಲನ್ ಪುರ ಕ್ರಿಕೆಟ್ ಮೈದಾನದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 20 ರನ್ ಗಳ ಭರ್ಜರಿ ಜಯ ದಾಖಲಿಸಿದೆ. ಆ ಮೂಲಕ ಹಾಲಿ ಟೂರ್ನಿಯಲ್ಲಿ ಕ್ವಾಲಿಫೈಯರ್ 2ಗೆ ಪ್ರವೇಶ ಮಾಡಿದೆ.
ಮುಂಬೈ ಇಂಡಿಯನ್ಸ್ ನೀಡಿದ್ದ 229 ರನ್ ಗಳ ಗುರಿಯನ್ನು ಬೆನ್ನು ಹತ್ತಿದ್ದ ಗುಜರಾತ್ ಟೈಟನ್ಸ್ ತಂಡ ನಿಗಧಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 20 ರನ್ ಗಳ ಅಂತದಲ್ಲಿ ಹೀನಾಯ ಸೋಲುಕಂಡಿತು. ಅಂತೆಯೇ ಹಾಲಿ ಐಪಿಎಲ್ ಟೂರ್ನಿಯ ಪ್ರಶಸ್ತಿ ರೇಸ್ ನಿಂದ ಗುಜರಾತ್ ಟೈಟನ್ಸ್ ತಂಡ ಹೊರಬಿತ್ತು.
ಐತಿಹಾಸಿಕ ದಾಖಲೆ ಬರೆದ Rohit Sharma
ಇನ್ನು ಈ ಪಂದ್ಯದಲ್ಲಿ ಮುಂಬೈ ಪರ ಆರಂಭಿಕ ಆಟಗಾರ ಹಿಟ್ ಮ್ಯಾನ್ ರೋಹಿತ್ ಶರ್ಮಾ ಕೇವಲ 50 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 81 ರನ್ ಸಿಡಿಸಿದರು. ಈ ಮೂಲಕ ರೋಹಿತ್ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ 2 ದಾಖಲೆಗಳನ್ನು ನಿರ್ಮಿಸಿದರು.
7000 ಐಪಿಎಲ್ ರನ್
ಇಂದಿನ ಪಂದ್ಯದಲ್ಲಿನ 81 ರನ್ ಗಳ ಮೂಲಕ ರೋಹಿತ್ ಶರ್ಮಾ ಐಪಿಎಲ್ ನಲ್ಲಿ 7000 ರನ್ ಗಳಿಸಿದ ದಾಖಲೆ ಬರೆದರು. ರೋಹಿತ್ ಶರ್ಮಾ ಒಟ್ಟು 271 ಪಂದ್ಯಗಳಿಂದ 2 ಶತಕ ಮತ್ತು 47 ಅರ್ಧಶತಕಗಳ ಸಹಿತ 7038 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಆರ್ ಸಿಬಿಯ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದು, ಕೊಹ್ಲಿ 8618 ರನ್ ಗಳಿಸಿದ್ದಾರೆ. ರೋಹಿತ್ 7038 ರನ್ ಗಳೊಂದಿಗೆ 2ನೇ ಸ್ಥಾನದಲ್ಲಿದ್ದು, ಶಿಖರ್ ಧವನ್ 6769 ರನ್ ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
300 ಸಿಕ್ಸರ್ ಭಾರಿಸಿದ ಮೊದಲ ಭಾರತೀಯ
ಇನ್ನು ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 4 ಸಿಕ್ಸರ್ ಸಿಡಿಸಿದ್ದು ಆ ಮೂಲಕ ಐಪಿಎಲ್ ನಲ್ಲಿ ತಮ್ಮ ಸಿಕ್ಸರ್ ಗಳ ಗಳಿಕೆಯನ್ನು 302ಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಅಂತೆಯೇ ಐಪಿಎಲ್ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಹೆಸರಿನಲ್ಲಿದೆ. ಗೇಯ್ಲ್ ಒಟ್ಟು 357 ಸಿಕ್ಸರ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಇದೀಗ ರೋಹಿತ್ ಶರ್ಮಾ 2ನೇ ಸ್ಥಾನಕ್ಕೇರಿದ್ದು, ರೋಹಿತ್ ಸಿಕ್ಸರ್ ಗಳಿಕೆ 302 ಆಗಿದೆ. 3ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದು ಕೊಹ್ಲಿ ಒಟ್ಟು 291 ಸಿಕ್ಸರ್ ಸಿಡಿಸಿದ್ದಾರೆ. 4ನೇ ಸ್ಥಾನದಲ್ಲಿ ಮಹೇಂದ್ರ ಸಿಂಗ್ ಧೋನಿ ಇದ್ದು 264 ಸಿಕ್ಸರ್ ಸಿಡಿಸಿದ್ದಾರೆ.
Advertisement