
ಮುಲ್ಲನ್‌ಪುರ: ಹಾಲಿ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಮಣಿಸಿದ ಮುಂಬೈ ತಂಡ 2ನೇ ಕ್ವಾಲಿಫೈಯರ್ ಹಂತಕ್ಕೆ ಪ್ರವೇಶ ಪಡೆದಿದ್ದು, ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ನಾಯಕ ಶುಭ್ ಮನ್ ಗಿಲ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಾ ನಡುವೆ ಭುಗಿಲೆದ್ದಿದ ಮುನಿಸಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಗಿಲ್ ಪ್ರತಿಕ್ರಿಯಿಸಿದ್ದಾರೆ.
ನಿನ್ನೆ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಸ್ಟಾರ್ ಆಟಗಾರರ ನಡುವೆ ಮುನಿಸು ಏರ್ಪಟ್ಟಿದ್ದು, ಇದು ಪಂದ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.
ನಿನ್ನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 20 ರನ್‌ಗಳಿಂದ ಮಣಿಸಿದ ಮುಂಬಯಿ, 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಗಳಿಸಿದೆ. ಅತ್ತ ಲೀಗ್ ಹಂತದಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ತೋರಿದ್ದ ಶುಭಮನ್ ಗಿಲ್ ಬಳಗ 4ನೇ ತಂಡವಾಗಿ ಅಭಿಯಾನ ಮುಗಿಸಿತ್ತು.
ಇದೇ ಪಂದ್ಯದಲ್ಲಿ ಶುಭ್ ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯಾ ನಡುವಿನ ಮುನಿಸು ಬಹಿರಂಗವಾಗಿತ್ತು. ನಿನ್ನೆಯ ಪಂದ್ಯದಲ್ಲಿ ಟಾಸ್ ಮಾಡುವ ಮೊದಲು ಇಬ್ಬರೂ ಒಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡರು. ನಂತರ ಟಾಸ್ ಮಾಡುವಾಗ ಹಾರ್ದಿಕ್ ಕೈ ಕುಲುಕಲು ಸಿದ್ಧರಿದ್ದರು.
ಹಾರ್ದಿಕ್ ಪಾಂಡ್ಯ ಟಾಸ್ ಬಳಿಕ ಕೈ ಕುಲುಕಲು ಮುಂದಾದರು. ಆದರೆ ಗಿಲ್ ಅದನ್ನು ಗಮನಿಸದೇ ಮುಂದಕ್ಕೆ ಸಾಗಿದರು. ಇದರಿಂದ ಪಾಂಡ್ಯಾ ಮುಜುಗರಕ್ಕೀಡಾದರು.
ನಂತರ, ಶುಭಮನ್ ಗಿಲ್ ವಿಕೆಟ್ ಕಳೆದುಕೊಂಡಾಗ ಹಾರ್ದಿಕ್ ಪಾಂಡ್ಯ ಹೆಚ್ಚು ಆಕ್ರಮಣಕಾರಿಯಾಗಿ ಸಂಭ್ರಮಿಸಿದರು. ಗಿಲ್ ಹತ್ತಿರುವ ಬರುವವರೆಗೂ ಸೌಮ್ಯವಾಗಿಯೇ ಇದ್ದ ಪಾಂಡ್ಯಾ ಗಿಲ್ ಸಾಯಿ ಸುದರ್ಶನ್ ಬಳಿ ಚರ್ಚೆ ನಡೆಸುತ್ತಿದ್ದಾಗ ಉದ್ದೇಶಪೂರ್ವಕವಾಗಿಯೇ ಆಕ್ರಮಣಶೈಲಿ ಸಂಭ್ರಮಿಸಿದರು. ಅಲ್ಲದೆ ಗಿಲ್ ಅವರನ್ನು ದಾಟಿ ಹೋಗುವಾಗ ಮುಖವನ್ನು ತಿರುಗಿಸಿಕೊಂಡರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದಂತೆಯೇ ಶುಭ್ ಮನ್ ಗಿಲ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಮೌನ ಮುರಿದ ಗುಜರಾತ್ ನಾಯಕ, ಗಿಲ್ ಸ್ಪಷ್ಟನೆ
ಇನ್ನು ಈ ವಿಚಾರವಾಗಿ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹಂಚಿಕೊಂಡಿರುವ ಶುಭ್ ಮನ್ ಗಿಲ್, ಹಾರ್ದಿಕ್ ಪಾಂಡ್ಯಾ ಜೊತೆ ತಮಗೇನೂ ಮುನಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾರ್ದಿಕ್ ಪಾಂಡ್ಯಾ ಜೊತೆ ಪ್ರೀತಿ ಬಿಟ್ಟರೆ ಬೇರೇನೂ ಇಲ್ಲ ಎಂದು ಅಡಿಬರಹ ಬರೆದು ಇಬ್ಬರೂ ಜೊತೆಗಿರುವ ಫೋಟೋವನ್ನು ಗಿಲ್ ಹಂಚಿಕೊಂಡಿದ್ದಾರೆ. ಅಲ್ಲದೆ ಇಂಟರ್ನೆಟ್ ನೋಡಿದೆಲ್ಲವೂ ಸತ್ಯ ಎಂದು ನಂಬಬೇಡಿ ಎಂದು ಮನವಿ ಮಾಡಿ ಹಾರ್ದಿಕ್ ಪಾಂಡ್ಯಾ ಅವರನ್ನೂ ಕೂಡ ಟ್ಯಾಗ್ ಮಾಡಿದ್ದಾರೆ.
Advertisement