

ಭಾನುವಾರ ರಾತ್ರಿ ನವಿ ಮುಂಬೈನಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವು ತಮ್ಮ ಚೊಚ್ಚಲ ಐಸಿಸಿ ಮಹಿಳಾ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಶಫಾಲಿ ವರ್ಮಾ ಅವರ 87 ರನ್‌ಗಳ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿತು. ನಂತರ, 299 ರನ್ ಗುರಿ ಬೆನ್ನತ್ತಿದ ಪ್ರೋಟಿಯಸ್ ತಂಡವು ಕಠಿಣ ಹೋರಾಟ ನೀಡಿದರೂ, 246 ರನ್‌ಗಳಿಗೆ ಆಲೌಟ್ ಆಯಿತು. ಶಫಾಲಿ ಎರಡು ವಿಕೆಟ್‌ಗಳನ್ನು ಪಡೆದರು. 21 ವರ್ಷದ ತಾರೆ ತನ್ನ ಆಲ್‌ರೌಂಡ್ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಅಮನ್‌ಜೋತ್ ಕೌರ್ 101 ರನ್ ಗಳಿಸಿದ್ದ ಅಪಾಯಕಾರಿ ಲಾರಾ ವೋಲ್ವಾರ್ಡ್ ಅವರನ್ನು ಅದ್ಭುತ ಕ್ಯಾಚ್ ಮೂಲಕ ಔಟ್ ಮಾಡಿದರು.
ಭಾರತದ ಐತಿಹಾಸಿಕ ಗೆಲುವಿನ ನಂತರ, ಅಮನ್‌ಜೋತ್ ಅವರ ತಂದೆ ತಮ್ಮ ಕುಟುಂಬದಲ್ಲಿನ ಬಿಕ್ಕಟ್ಟಿನ ಬಗ್ಗೆ ಬಹಿರಂಗಪಡಿಸಿದ್ದಾರೆ. ಪಂದ್ಯಾವಳಿ ಸಮಯದಲ್ಲಿ, ಅಮನ್‌ಜೋತ್ ಅವರ ಅಜ್ಜಿ ಹೃದಯಾಘಾತದಿಂದ ಬಳಲುತ್ತಿದ್ದರು. ಆದರೆ, ವಿಶ್ವಕಪ್‌ನತ್ತ ಗಮನ ಹರಿಸಲಿ ಎನ್ನುವ ಕಾರಣಕ್ಕೆ ಕುಟುಂಬವು ಆಲ್‌ರೌಂಡರ್‌ಗೆ ಪರಿಸ್ಥಿತಿಯ ಬಗ್ಗೆ ತಿಳಿಸದಿರಲು ನಿರ್ಧರಿಸಿತು ಎಂದಿದ್ದಾರೆ.
'ಮೊಹಾಲಿಯಲ್ಲಿರುವ ನಮ್ಮ ಹಂತ 5ರ ನಿವಾಸದ ಬಳಿ ಬೀದಿಯಲ್ಲಿ ಮತ್ತು ಉದ್ಯಾನದಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ ದಿನದಿಂದಲೂ ನನ್ನ ತಾಯಿ ಭಗವಂತಿ ಅವರು ಅಮನ್‌ಜೋತ್‌ಗೆ ಶಕ್ತಿಯ ಆಧಾರಸ್ತಂಭವಾಗಿದ್ದಾರೆ. ನಾನು ಬಲೋಂಗಿಯಲ್ಲಿರುವ ನನ್ನ ಕಾರ್ಪೆಂಟರ್ ಅಂಗಡಿಯಲ್ಲಿದ್ದಾಗ, ಅವರು ಅಮನ್‌ಜೋತ್ ಹುಡುಗರು ಮತ್ತು ಇತರ ಹುಡುಗಿಯರೊಂದಿಗೆ ಆಟವಾಡುವುದನ್ನು ಮೇಲ್ವಿಚಾರಣೆ ಮಾಡುತ್ತಿದ್ದರು' ಎಂದು ಅಮನ್‌ಜೋತ್ ಅವರ ತಂದೆ ಭೂಪಿಂದರ್ ಸಿಂಗ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
'ಕಳೆದ ತಿಂಗಳು ಅವರಿಗೆ ಹೃದಯಾಘಾತವಾದ ನಂತರ, ನಾವು ಅದರ ಬಗ್ಗೆ ಅಮನ್‌ಜೋತ್‌ಗೆ ಹೇಳಲಿಲ್ಲ ಮತ್ತು ಕಳೆದ ಕೆಲವು ದಿನಗಳಿಂದ ನಾವು ಅವರ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಸಮಯ ಕಳೆಯುತ್ತಿದ್ದೇವೆ. ಈ ಒತ್ತಡದ ಸಮಯದಲ್ಲಿ ವಿಶ್ವಕಪ್ ಗೆಲುವು ನಮಗೆ ಖಂಡಿತವಾಗಿಯೂ ಮುಲಾಮು ನೀಡಿದೆ' ಎಂದು ಅವರು ಹೇಳಿದರು.
ದಕ್ಷಿಣ ಆಫ್ರಿಕಾ ತಂಡದ ಭರವಸೆಯ ನಾಯಕಿ ವೋಲ್ವಾರ್ಡ್ಟ್ ಅವರ ವಿಕೆಟ್ ಭಾರತಕ್ಕೆ ಪಂದ್ಯವನ್ನೇ ಬದಲಾಯಿಸಿತು. ಆ ಕ್ಯಾಚ್ ಹಿಡಿದ ಅಮನ್‌ಜೋತ್ ಅವರ ಪ್ರತಿಭೆಯನ್ನು ಹಲವರು ಕೊಂಡಾಡಿದರು.
'ಕ್ಯಾಚ್ ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿತ್ತು. ನನ್ನ ಜೀವನದಲ್ಲಿ ಮೊದಲ ಬಾರಿಗೆ, ಕ್ಯಾಚ್ ಹಿಡಿಯಲು ನನಗೆ ಎರಡನೇ ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ. ಅದನ್ನು ವ್ಯಕ್ತಪಡಿಸಲು ನನ್ನಲ್ಲಿ ಪದಗಳಿಲ್ಲ. ಇದರ ಅರ್ಥ ಬಹಳಷ್ಟಿದೆ; ಸುತ್ತಲೂ ಜನಸಮೂಹ ಹುರಿದುಂಬಿಸುವುದನ್ನು ನೀವು ನೋಡಬಹುದು. ನಾವು ಇತಿಹಾಸ ಸೃಷ್ಟಿಸಿದ್ದೇವೆ. ಇದು ಕೇವಲ ಆರಂಭ - ಭಾರತೀಯ ಕ್ರಿಕೆಟ್ ಮುಂದಿನ ಹಂತದಲ್ಲಿರಲಿದೆ' ಎಂದು ಪಂದ್ಯದ ನಂತರ ಅಮನ್‌ಜೋತ್ ಹೇಳಿದರು.
Advertisement