

ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್ ಗಳ ಅಂತರದಲ್ಲಿ ಮಣಿಸಿ ಚೊಚ್ಚಲ ವಿಶ್ವಕಪ್ ಜಯಿಸಿದ ಭಾರತ ತಂಡದ ಸಾಧನೆಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್ ಗಳ ಅಂತರದಲ್ಲಿ ಮಣಿಸಿ ಭರ್ಜರಿ ಜಯ ದಾಖಲಿಸಿತು.
ಭಾರತ ನೀಡಿದ್ದ 299 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 45.3 ಓವರ್ ನಲ್ಲಿ 246 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದು ಕೊಂಡು 52 ರನ್ ಗಳ ಅಂತರದಲ್ಲಿ ಭಾರತದ ಎದುರು ಮಂಡಿಯೂರಿತು.
ಆ ಮೂಲಕ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ ಆರಂಭವಾದ ಬರೊಬ್ಬರಿ 52 ವರ್ಷಗಳ ಬಳಿಕ ಭಾರತ ತಂಡ ಮೊಟ್ಟಮೊದಲ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ.
ಮಹಿಳಾ ತಂಡಕ್ಕೆ ಅಭಿನಂದನೆಗಳ ಮಹಾಪೂರ
ಇನ್ನು ಭಾರತ ತಂಡದ ಅತ್ಯುತ್ತಮ ಪ್ರದರ್ಶನಕ್ಕೆ ದೇಶಾದ್ಯಂತ ವ್ಯಾಪಕ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ತಂಡದ ಉತ್ಸಾಹ ಮತ್ತು ಪ್ರದರ್ಶನವನ್ನು ಶ್ಲಾಘಿಸಿ ಅಭಿನಂದನಾ ಸಂದೇಶ ರವಾನಿಸಿದ್ದಾರೆ.
'ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ಫೈನಲ್ಸ್‌ನಲ್ಲಿ ಭಾರತ ತಂಡದ ಅದ್ಭುತ ಗೆಲುವು. ಫೈನಲ್‌ನಲ್ಲಿ ಅವರ ಪ್ರದರ್ಶನವು ಉತ್ತಮ ಕೌಶಲ್ಯ ಮತ್ತು ಆತ್ಮವಿಶ್ವಾಸದಿಂದ ಗುರುತಿಸಲ್ಪಟ್ಟಿತು. ತಂಡವು ಪಂದ್ಯಾವಳಿಯಾದ್ಯಂತ ಅಸಾಧಾರಣ ಟೀಮ್ ವರ್ಕ್ ಮತ್ತು ದೃಢತೆಯನ್ನು ತೋರಿಸಿತು. ನಮ್ಮ ಆಟಗಾರ್ತಿಯರಿಗೆ ಅಭಿನಂದನೆಗಳು. ಈ ಐತಿಹಾಸಿಕ ಗೆಲುವು ಭವಿಷ್ಯದ ಚಾಂಪಿಯನ್‌ಗಳನ್ನು ಕ್ರೀಡೆಗಳನ್ನು ಕೈಗೆತ್ತಿಕೊಳ್ಳಲು ಪ್ರೇರೇಪಿಸುತ್ತದೆ' ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, X ನಲ್ಲಿ ಪೋಸ್ಟ್‌ನಲ್ಲಿ, 'ವಿಶ್ವ ಚಾಂಪಿಯನ್ ಟೀಮ್ ಇಂಡಿಯಾಕ್ಕೆ ಹ್ಯಾಟ್ಸ್ ಆಫ್. ನಮ್ಮ ತಂಡವು #ICCCWomensWorldCup2025 ಅನ್ನು ಆಕಾಶಕ್ಕೆ ಏರಿಸುತ್ತಿರುವುದು ರಾಷ್ಟ್ರಕ್ಕೆ ಕಿರೀಟಧಾರಣೆಯ ಕ್ಷಣವಾಗಿದೆ. ನಿಮ್ಮ ಅದ್ಭುತ ಕ್ರಿಕೆಟ್ ಕೌಶಲ್ಯವು ಲಕ್ಷಾಂತರ ಹುಡುಗಿಯರಿಗೆ ಸ್ಫೂರ್ತಿಯ ಹಾದಿಯನ್ನು ಸುಗಮಗೊಳಿಸಿದೆ. ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಪೋಸ್ಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ವಿಜಯವನ್ನು ರಾಷ್ಟ್ರೀಯ ಹೆಮ್ಮೆಯ ಕ್ಷಣ ಎಂದು ಶ್ಲಾಘಿಸಿದರು. 'ಐತಿಹಾಸಿಕ ಗೆಲುವು. ವಿಶ್ವ ಚಾಂಪಿಯನ್ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು! ದೇಶದ ಜನರಿಗೆ ಹೃತ್ಪೂರ್ವಕ ಅಭಿನಂದನೆಗಳು! ನೀವೆಲ್ಲರೂ ರಾಷ್ಟ್ರದ ಹೆಮ್ಮೆ. ಭಾರತ ಮಾತಾ ಕಿ ಜೈ,' ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಸಿಎಂ ಸಿದ್ದರಾಮಯ್ಯ ಎಕ್ಸ್ ನಲ್ಲಿ ಭಾರತ ತಂಡದ ಸಾಧನೆಯನ್ನು ಶ್ಲಾಘಿಸಿದ್ದು, 'ಭಾರತೀಯ ಮಹಿಳಾ ಕ್ರಿಕೆಟ್ ತಂಡ ಅದ್ಭುತ ಆಟದ ಮೂಲಕ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ವಿಶ್ವವಿಜೇತ ಭಾರತೀಯ ಕ್ರಿಕೆಟ್ ಆಟಗಾರ್ತಿಯರಿಗೆ ಅಭಿನಂದನೆಗಳು. ಇಡೀ ಪಂದ್ಯಾವಳಿಯುದ್ದಕ್ಕೂ ಅತ್ಯಂತ ಸಂಘಟಿತ ಪ್ರದರ್ಶನ ನೀಡುತ್ತಾ ಬಂದಿದ್ದ ಭಾರತೀಯ ಆಟಗಾರ್ತಿಯರು ನಿಜಕ್ಕೂ ಈ ಪ್ರಶಸ್ತಿಗೆ ಅರ್ಹರು. ಕ್ರಿಕೆಟ್ ಪ್ರೇಮಿಯಾದ ನನಗಿದು ಹೆಚ್ಚು ಖುಷಿ ಕೊಟ್ಟಿದೆ. ಇತಿಹಾಸ ಸೃಷ್ಟಿಯಾದ ಈ ದಿನ ಬಹುಕಾಲ ನೆನಪಿನಲ್ಲಿ ಉಳಿಯುವಂತಹುದ್ದು'. ಎಂದು ಪೋಸ್ಟ್ ಮಾಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, 'ವಿಶ್ವ ಚಾಂಪಿಯನ್ಸ್ ಭಾರತ.. 2025 ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು. ನಿಮ್ಮ ಗೆಲುವು ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣ ಮತ್ತು ಕನಸು ಕಾಣುವ ಪ್ರತಿಯೊಬ್ಬ ಯುವತಿಯಿಗೂ ಸ್ಫೂರ್ತಿ' ಎಂದು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕೂಡ ಭಾರತ ತಂಡದ ಸಾಧನೆಯನ್ನು ಕೊಂಡಾಡಿದ್ದು, 'ವಿಶ್ವದ ಚಾಂಪಿಯನ್ನರೇ, ನಮ್ಮ ನೀಲಿ ಬಣ್ಣದ ಮಹಿಳೆಯರು ಪ್ರಕಾಶಮಾನವಾಗಿ ಮಿಂಚುತ್ತಿದ್ದಾರೆ! ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್, ಶುದ್ಧ ಆನಂದ! ಶಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ ಅವರ ಸರ್ವತೋಮುಖ ಸಾಮರ್ಥ್ಯಕ್ಕೆ ಅಭಿನಂದನೆಗಳು, ನೀವು ಇಂದು ರಾತ್ರಿ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ' ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಈ ಪಟ್ಟಿಗೆ ಸೇರಿದ್ದು, ಭಾರತ ತಂಡದ ಈ ಸಾಧನೆಯನ್ನು 'ನಂಬಲಾಗದ' ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯ ಮೂಲ ಎಂದು ಕರೆದಿದ್ದಾರೆ. 'ವಿಶ್ವಕಪ್ ಫೈನಲ್‌ನಲ್ಲಿ ಅವರ ಸಾಧನೆಗಾಗಿ ನಮ್ಮ ಮಹಿಳಾ ತಂಡದ ಬಗ್ಗೆ ನಂಬಲಾಗದಷ್ಟು ಹೆಮ್ಮೆಯಿದೆ.' "ಅವರು ತೋರಿಸಿದ ಹೋರಾಟ ಮತ್ತು ಪಂದ್ಯಾವಳಿಯಾದ್ಯಂತ ಅವರು ಪ್ರದರ್ಶಿಸಿದ ಆಜ್ಞೆಯು ಯುವ ಹುಡುಗಿಯರ ಪೀಳಿಗೆಗೆ ಸ್ಫೂರ್ತಿಯಾಗಲಿದೆ" ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement