

ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಗೆಲುವಿನ ಬಳಿಕ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಹೊಸ ಸಂಭ್ರಮಾಚರಣೆಗೆ ನಾಂದಿ ಹಾಡಿದ್ದಾರೆ.
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ 13ನೇ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಟೀಮ್ ಇಂಡಿಯಾ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿ ಆಫ್ರಿಕಾಗೆ ಗೆಲ್ಲಲು 299 ರನ್ ಗಳ ಗುರಿ ನೀಡಿತ್ತು.
ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 45.3 ಓವರ್ಗಳಲ್ಲಿ 246 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಭಾರತ ತಂಡವು 52 ರನ್ಗಳ ಜಯಭೇರಿ ಬಾರಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಹೊಸ ಸಂಭ್ರಮಾಚರಣೆಗೆ ನಾಂದಿ ಹಾಡಿದ ಹರ್ಮನ್ ಪ್ರೀತ್ ಕೌರ್
ಈ ಚಾಂಪಿಯನ್ ಪಟ್ಟದೊಂದಿಗೆ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಹೊಸ ಸೆಲೆಬ್ರೇಷನ್ಗೆ ನಾಂದಿ ಹಾಡಿದ್ದಾರೆ. ಈ ಹಿಂದೆ ಭಾರತ ಪುರುಷರ ತಂಡದ ನಾಯಕ ರೋಹಿತ್ ಶರ್ಮಾ ರೊಬೋಟ್ ವಾಕ್ ಸಂಭ್ರಮ ಮಾಡಿದ್ದರು.
ನಿನ್ನೆ ಹರ್ಮನ್ ಪ್ರೀತ್ ಕೂಡ ಅಂತಹುದೇ ವಿಶೇಷ ಸಂಭ್ರಮ ಮಾಡಿದ್ದಾರೆ. ಈ ಬಾರಿ ಹರ್ಮನ್ ಪ್ರೀತ್ ಸಹ ಆಟಗಾರ್ತಿಯರಿಗೆ ಟ್ರೋಫಿ ತಗೋ… ಕೊಡಲ್ಲ ಎನ್ನುವಂತೆ ಸಂಭ್ರಮಿಸಿ ಕಪ್ ಎತ್ತಿ ಹಿಡಿದಿದ್ದಾರೆ. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿದೆ.
Advertisement