

ನವದೆಹಲಿ: ಭಾರತ ಕ್ರಿಕೆಟ್ ತಂಡದ ಹಿರಿಯ ವೇಗಿ ಮಹಮದ್ ಶಮಿ ಮಾಜಿ ಪತ್ನಿ ವಿಚ್ಛೇದನ ವಿಚಾರವಾಗಿ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಜೀವನ ನಿರ್ವಹಣೆಗೆ ತಿಂಗಳಿಗೆ 4 ಲಕ್ಷ ರೂ ಹಣ ಸಾಲುವುದಿಲ್ಲ.. ಎಂದು ಅರ್ಜಿ ಸಲ್ಲಿಸಿದ್ದಾರೆ.
ಈಗಾಗಲೇ ಭಾರತ ತಂಡ ಸೇರ್ಪಡೆಗೆ ಹರಸಾಹಸ ಪಡುತ್ತಿರುವ ಭಾರತ ತಂಡದ ಸ್ಟಾರ್ ಆಟಗಾರ ಮಹಮದ್ ಶಮಿ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಾಸ್ತವವಾಗಿ ಶಮಿ ಅವರ ಮಾಜಿ ಪತ್ನಿ ಹಸಿನ್ ಜಹಾನ್ ಜೀವನಾಂಶ ಹೆಚ್ಚಿಸುವಂತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ತನ್ನ ಜೀವನಾಂಶವನ್ನು ತಿಂಗಳಿಗೆ 10 ಲಕ್ಷಕ್ಕೆ ಹೆಚ್ಚಿಸಬೇಕೆಂದು ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.
4 ಲಕ್ಷ ರೂ ಜೀವನ ನಿರ್ವಾಹಣೆಗೆ ಸಾಕಾಗುತ್ತಿಲ್ಲ ಎಂದು ಹಸಿನ್ ಜಹಾನ್ ಇದೀಗ ಕೋಲ್ಕತ್ತಾ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ, ತನ್ನ ಮತ್ತು ತನ್ನ ಮಗಳ ಮಧ್ಯಂತರ ಭತ್ಯೆಯನ್ನು 10 ಲಕ್ಷ ರೂಗಳಿಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ.
ತನಗೆ 7, ಮಗಳಿಗೆ 3 ಲಕ್ಷ ರೂ..
ಹಸಿನ್ ಜಹಾನ್ ಮೊದಲಿನಿಂದಲೂ 10 ಲಕ್ಷ ರೂ. ಭತ್ಯೆಯನ್ನು ಕೇಳುತ್ತಿದ್ದು, ಅದರಲ್ಲಿ ತನಗೆ 7 ಲಕ್ಷ ಮತ್ತು ತನ್ನ ಮಗಳಿಗೆ 3 ಲಕ್ಷ ಮೀಸಲಿರಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಆದಾಗ್ಯೂ, ಅವರ ಬೇಡಿಕೆಯನ್ನು ವಿಚಾರಣಾ ನ್ಯಾಯಾಲಯ ಮತ್ತು ನಂತರ ಹೈಕೋರ್ಟ್ ತಿರಸ್ಕರಿಸಿದ್ದವು.
500 ಕೋಟಿ ರೂ ಮೌಲ್ಯದ ಆಸ್ತಿ
ಈಗ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ಹಸಿನ್ ಜಹಾನ್, ಶಮಿ ಬಳಿ ಸುಮಾರು 500 ಕೋಟಿ ಮೌಲ್ಯದ ಆಸ್ತಿ ಇದೆ. ಅಲ್ಲದೆ ಶಮಿ ಮತ್ತು ನನ್ನ ಜೀವನ ನಿರ್ವಾಹಣೆಯಲ್ಲಿ ಗಮನಾರ್ಹ ವ್ಯತ್ಯಾಸವಿದೆ. ಆದ್ದರಿಂದ ಶಮಿ, ನನ್ನ ಮತ್ತು ನನ್ನ ಮಗಳ ಜೀವನ ಮಟ್ಟವನ್ನು ಸುಧಾರಿಸಲು ಬೇಕಾಗುವಷ್ಟು ಜೀವನಾಂಶವನ್ನು ನೀಡುತ್ತಿಲ್ಲ ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಮಾತ್ರವಲ್ಲದೇ ಮೇಲ್ಮನವಿಯಲ್ಲಿ ಇತರ ಕ್ರಿಕೆಟಿಗರನ್ನು ಉಲ್ಲೇಖಿಸಿರುವ ಹಸಿನ್ ಜಹಾನ್, ಇತರ ಗಣ್ಯ ಕ್ರಿಕೆಟಿಗರಂತೆ ತನಗೂ ಅದೇ ಗುಣಮಟ್ಟದ ಜೀವನವನ್ನು ನಡೆಸುವ ಹಕ್ಕಿದೆ. ಆದರೆ ಶಮಿ ಅದಕ್ಕೆ ಬೇಕಾಗುವಷ್ಟು ಜೀವನಾಂಶವನ್ನು ನೀಡುತ್ತಿಲ್ಲ ಆದ್ದರಿಂದ ಜೀವನಾಂಶವನ್ನು 10 ಲಕ್ಷಕ್ಕೆ ಏರಿಸುವಂತೆ ಕೇಳಿಕೊಂಡಿದ್ದಾರೆ.
4 ಲಕ್ಷ ಕೂಡ ಸಾಕಾಗುವುದಿಲ್ಲವೇ..: ಸುಪ್ರೀಂ ಕೋರ್ಟ್ ಪ್ರಶ್ನೆ
ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇನ್ನೂ ಯಾವುದೇ ಆದೇಶ ಹೊರಡಿಸಿಲ್ಲ. ಬದಲಿಗೆ ಹಸಿನ್ ಜಹಾನ್ ಅವರನ್ನೇ ಪ್ರಶ್ನಿಸಿರುವ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಹಸಿನ್ ಜಹಾನ್ ಅವರ ವಕೀಲರ ಬಳಿ, ‘ಸಂತ್ರಸ್ತೆಗೆ ತಿಂಗಳಿಗೆ 4 ಲಕ್ಷ ಕೂಡ ಸಾಕಾಗುವುದಿಲ್ಲವೇ’ ಎಂದು ಕೇಳಿದೆ.
Advertisement