
ನವದೆಹಲಿ: ಆಸ್ಟ್ರೇಲಿಯಾ ಪ್ರವಾಸಕ್ಕೆ ತಮ್ಮನ್ನು ಪರಿಗಣಿಸದ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಭಾರತ ತಂಡದ ಸ್ಟಾರ್ ವೇಗಿ ಮಹಮದ್ ಶಮಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಉತ್ತಮ ಪ್ರದರ್ಶನದ ಹೊರತಾಗಿಯೂ ಆಸ್ಟ್ರೇಲಿಯಾ ಪ್ರವಾಸಕ್ಕೆ ತಮ್ಮನ್ನು ಪರಿಗಣಿಸದಿರುವ ಕುರಿತು ಟೀಂ ಇಂಡಿಯಾ ಸ್ಟಾರ್ ವೇಗಿ ಮಹಮದ್ ಶಮಿ ನೇರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಮಹಮದ್ ಶಮಿ ಅವರನ್ನು ಆಯ್ಕೆ ಮಾಡಲಾಗಿಲ್ಲ. ಇದಕ್ಕೆ ಕಾರಣ ನೀಡಿದ್ದ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್, ಶಮಿ ಅವರ ಫಿಟ್‌ನೆಸ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದರು.
ಆಯ್ಕೆದಾರರು ಈ ಎರಡೂ ತಂಡಗಳಲ್ಲಿ ಶಮಿಗೆ ಸ್ಥಾನ ನೀಡಿಲ್ಲ. ಶಮಿ ಅವರ ಫಿಟ್‌ನೆಸ್ ಬಗ್ಗೆ ತಮ್ಮ ಬಳಿ ಯಾವುದೇ ಮಾಹಿತಿ ಇಲ್ಲ, ಅದಕ್ಕಾಗಿಯೇ ಅವರನ್ನು ಪರಿಗಣಿಸಲಾಗಿಲ್ಲ ಎಂದು ತಂಡಗಳನ್ನು ಘೋಷಿಸುವಾಗ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಹೇಳಿದರು. ಇದರ ಬೆನ್ನಲ್ಲೇ ಶಮಿ ಅವರು ಆಯ್ಕೆದಾರರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ನೀವಿದ್ದ ಜಾಗಕ್ಕೇ ಅಪ್ಡೇಟ್ ಬರಲ್ಲ
ಇನ್ನು ಅಜಿತ್ ಅಗರ್ಕರ್ ಅವರ ಈ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮಹಮದ್ ಶಮಿ, 'ಫಿಟ್‌ನೆಸ್ ಬಗ್ಗೆ ಆಯ್ಕೆ ಸಮಿತಿಗೆ ತಿಳಿಸುವುದು ನನ್ನ ಕೆಲಸವಲ್ಲ ಎಂದು ಖಾರವಾಗಿ ಮಾತನಾಡಿದ್ದಾರೆ.
'ನಾನು CT2025, IPL2025, ದುಲೀಪ್ ಟ್ರೋಫಿ ಆಡಿದ್ದೇನೆ ಮತ್ತು ನಾನು ಉತ್ತಮ ಲಯದಲ್ಲಿದ್ದೇನೆ. ಆಯ್ಕೆ ಮಾಡುವುದು ನನ್ನ ಕೈಯಲ್ಲಿಲ್ಲ. ನನಗೆ ಫಿಟ್‌ನೆಸ್ ಸಮಸ್ಯೆ ಇದ್ದರೆ ನಾನೇಕೆ ಬಂಗಾಳ ಪರ ರಣಜಿ ಕ್ರಿಕೆಟ್ ಆಡುತ್ತೇನೆ. ತಂಡದ ಆಯ್ಕೆ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸುವ ಅಗತ್ಯ ನನಗಿಲ್ಲ. ನೀವು ಅಪ್‌ಡೇಟ್ ಬಯಸಿದರೆ ನೀವು ಅದನ್ನು ಕೇಳಬೇಕು, ಯಾರೂ ಕೇಳದಿದ್ದರೆ ಅಪ್‌ಡೇಟ್ ನೀಡುವುದು ನನ್ನ ಕೆಲಸವಲ್ಲ' ಎಂದು ಶಮಿ ತಿಳಿಸಿದ್ದಾರೆ.
4 ದಿನಗಳ ರಣಜಿ ಆಡುವಾಗ 50 ಓವರ್ ಗಳ ಏಕದಿನ ಸಾಧ್ಯವಿಲ್ಲವೇ
ಇದೇ ವೇಳೆ 'ರಣಜಿ ಟ್ರೋಫಿಯಲ್ಲಿ 4 ದಿನಗಳ ಪಂದ್ಯವನ್ನಾಡಲು ನನಗೆ ಸಾಧ್ಯವಾದರೆ, 50 ಓವರ್‌ಗಳ ಕ್ರಿಕೆಟ್ ಕೂಡ ಆಡಬಹುದು ತಾನೇ ಎಂದು ಹೇಳಿದರು. ಫಿಟ್‌ನೆಸ್ ಬಗ್ಗೆ ಕೇಳುವುದು, ಹೇಳುವುದು ಅಥವಾ ಮಾಹಿತಿ ನೀಡುವುದು ನನ್ನ ಜವಾಬ್ದಾರಿಯಲ್ಲ. ಎನ್‌ಸಿಎಗೆ ಹೋಗಿ, ಸಿದ್ಧರಾಗಿ ಪಂದ್ಯ ಆಡುವುದೊಂದೇ ನನ್ನ ಕೆಲಸ ಎನ್ನುವ ಮೂಲಕ ಆಯ್ಕೆದಾರರ ವಿರುದ್ಧ ಶಮಿ ಆಕ್ರೋಶ ಹೊರಹಾಕಿದ್ದಾರೆ.
ಅಂದಹಾಗೆ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿ ಈ ತಿಂಗಳ 19 ರಿಂದ ಪ್ರಾರಂಭವಾಗಲಿದೆ. ಮೊದಲು ಮೂರು ಪಂದ್ಯಗಳ ಏಕದಿನ ಸರಣಿ, ನಂತರ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಎರಡೂ ಸರಣಿಗಳಲ್ಲಿ ಭಾಗವಹಿಸುವ ಭಾರತೀಯ ತಂಡಗಳನ್ನು ಬಿಸಿಸಿಐ ಈಗಾಗಲೇ ಆಯ್ಕೆ ಮಾಡಿದೆ.
Advertisement