

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆಲ್ಲಲು ಭಾರತಕ್ಕೆ ಸಹಾಯ ಮಾಡಿದ ಕೆಲವು ದಿನಗಳ ನಂತರ, 22 ವರ್ಷದ ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ ಅವರನ್ನು ಪಶ್ಚಿಮ ಬಂಗಾಳ ಪೊಲೀಸ್‌ನಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಆಗಿ ನೇಮಿಸಲಾಗಿದೆ. ನವೆಂಬರ್ 8ರ ಶನಿವಾರ ಈಡನ್ ಗಾರ್ಡನ್‌ನಲ್ಲಿ ನಡೆದ ಭವ್ಯ ಸನ್ಮಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು.
ಪ್ರತಿಷ್ಠಿತ ಬಂಗ ಭೂಷಣ್ ಪ್ರಶಸ್ತಿಯನ್ನು ಪಡೆದ ರಿಚಾ ಅವರಿಗೆ ಬಂಗಾಳ ಕ್ರಿಕೆಟ್ ಸಂಸ್ಥೆ (CAB) ಚಿನ್ನ ಲೇಪಿತ ಬ್ಯಾಟ್ ಮತ್ತು ಚೆಂಡನ್ನು ನೀಡಿ ಗೌರವಿಸಿತು. ಫೈನಲ್‌ನಲ್ಲಿ ಅವರು ಗಳಿಸಿದ ಪ್ರತಿ ರನ್‌ಗೆ ಒಂದು ಲಕ್ಷದಂತೆ 34 ಲಕ್ಷ ರೂ. ನಗದು ಬಹುಮಾನವನ್ನು ಸಂಘ ಘೋಷಿಸಿತು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರ ಇನಿಂಗ್ಸ್ ಅತ್ಯಂತ ನಿರ್ಣಾಯಕವಾಗಿತ್ತು.
ಭಾರತದ ವಿಶ್ವಕಪ್ ಗೆಲುವಿಗೆ ಯುವ ಆಟಗಾರ್ತಿ ನೀಡಿದ ಕೊಡುಗೆಯನ್ನು ಗುರುತಿಸಿ ಬಂಗಾಳ ಸರ್ಕಾರ ಅವರಿಗೆ ಚಿನ್ನದ ಸರ ನೀಡಿ ಗೌರವಿಸಿತು. ಇದರೊಂದಿಗೆ, ದೀಪ್ತಿ ಶರ್ಮಾ (ಯುಪಿ ಪೊಲೀಸ್), ಮೊಹಮ್ಮದ್ ಸಿರಾಜ್ (ತೆಲಂಗಾಣ ಪೊಲೀಸ್) ಮತ್ತು ಜೋಗಿಂದರ್ ಶರ್ಮಾ (ಹರಿಯಾಣ ಪೊಲೀಸ್) ಸೇರಿದಂತೆ ಕ್ರೀಡಾ ಶ್ರೇಷ್ಠತೆಗಾಗಿ ಡಿಎಸ್ಪಿ ಶ್ರೇಣಿಯನ್ನು ಪಡೆದ ಅಪರೂಪದ ಕ್ರಿಕೆಟಿಗರ ಪಟ್ಟಿಗೆ ರಿಚಾ ಸೇರಿದರು. ಕಳೆದ ವರ್ಷವಷ್ಟೇ ರಿಚಾ 12ನೇ ತರಗತಿ ಪರೀಕ್ಷೆಗಳನ್ನು ಬರೆದಿದ್ದರಿಂದ ದ್ವಿಪಕ್ಷೀಯ ಸರಣಿಯಿಂದ ಹೊರಗುಳಿದಿದ್ದರು.
ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಮಾಜಿ ನಾಯಕರಾದ ಸೌರವ್ ಗಂಗೂಲಿ ಮತ್ತು ಜೂಲನ್ ಗೋಸ್ವಾಮಿ ಅವರೊಂದಿಗೆ ವೇದಿಕೆ ಹಂಚಿಕೊಂಡ ರಿಚಾ, ಬಂಗಾಳದ ಮೊದಲ ಮಹಿಳಾ ಕ್ರಿಕೆಟ್ ವಿಶ್ವಕಪ್ ವಿಜೇತೆಯಾಗಿ ಗುರುತಿಸಿಕೊಂಡರು. ಗಂಗೂಲಿ ರಿಚಾ ಅವರ ನಿರ್ಭೀತ ಬ್ಯಾಟಿಂಗ್ ಅನ್ನು ಶ್ಲಾಘಿಸಿದರು.
'ನಾನು ಇನಿಂಗ್ಸ್ ಆರಂಭಿಸುತ್ತಿದ್ದೆ. ಆದರೆ, ವೈಟ್-ಬಾಲ್ ಕ್ರಿಕೆಟ್‌ನಲ್ಲಿ 6 ಮತ್ತು 7ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಪಾತ್ರ ಎಷ್ಟು ಕಷ್ಟ ಎಂದು ನನಗೆ ತಿಳಿದಿದೆ. ಗರಿಷ್ಠ ರನ್ ಗಳಿಸಲು ನಿಮಗೆ ಕನಿಷ್ಠ ಎಸೆತಗಳು ಸಿಗುತ್ತವೆ. ರಿಚಾ ಅವರ ಸ್ಟ್ರೈಕ್ ಈ ವಿಶ್ವಕಪ್‌ನಲ್ಲಿ ಭಾರತದ ಅಭಿಯಾನಕ್ಕೆ ವ್ಯತ್ಯಾಸವನ್ನುಂಟು ಮಾಡಿತು' ಎಂದು ಅವರು ಹೇಳಿದರು.
'2013 ರಲ್ಲಿ ಬಂಗಾಳ ಕ್ರಿಕೆಟ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಆದ್ದರಿಂದ ನಾನು ಸಿಎಬಿ ಅಧಿಕಾರಿಗಳನ್ನು ಪ್ರತಿಭಾ ಹುಡುಕಾಟ ಕಾರ್ಯಕ್ರಮವನ್ನು ಪ್ರಾರಂಭಿಸಲು ವಿನಂತಿಸಿದೆ. ಅವರು ಔದಾರ್ಯದಿಂದ ಒಪ್ಪಿಕೊಂಡರು. ಆಗ ನನಗೆ ಜಿಲ್ಲೆಗಳಿಗೆ ತೆರಳಲು ಅವಕಾಶ ಸಿಕ್ಕಿತು ಮತ್ತು ನಾನು ರಿಚಾ ಅವರನ್ನು ಮೊದಲು ನೋಡಿದ್ದು ಹೀಗೆ' ಎಂದು ಜೂಲನ್ ಹೇಳಿದರು.
ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್‌ನಲ್ಲಿ ರಿಚಾ ಅವರು ಎಂಟು ಪಂದ್ಯಗಳಲ್ಲಿ 40 ಸರಾಸರಿಯಲ್ಲಿ ಮತ್ತು 133.52 ಸ್ಟ್ರೈಕ್ ರೇಟ್‌ನೊಂದಿಗೆ 235 ರನ್ ಗಳಿಸಿದ್ದಾರೆ.
Advertisement