

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ತಾರೆ ಶ್ರೀವತ್ಸ್ ಗೋಸ್ವಾಮಿ, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಆಡುವುದನ್ನು ಮುಂದುವರಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯಲ್ಲಿ ಭಾರತದ ಬ್ಯಾಟಿಂಗ್ ಕಳಪೆ ಪ್ರದರ್ಶನ ಮುಂದುವರಿದ ನಂತರ ಅವರ ಈ ಹೇಳಿಕೆ ಬಂದಿದೆ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಭಾರತದ ಮಾಜಿ ನಾಯಕ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ಹಠಾತ್ತನೆ ತೆರೆ ಎಳೆದು, ಇಡೀ ಜಗತ್ತನ್ನೇ ಅಚ್ಚರಿಗೊಳಿಸಿದರು.
ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಗೋಸ್ವಾಮಿ, ಟೆಸ್ಟ್ ಕ್ರಿಕೆಟ್ ಕೊಹ್ಲಿಯನ್ನು ಮಿಸ್ ಮಾಡಿಕೊಳ್ಳುತ್ತಿದೆ. ವಿರಾಟ್ ಏಕದಿನ ಪಂದ್ಯಗಳಿಂದ ನಿವೃತ್ತಿ ಹೊಂದಬೇಕಿತ್ತು ಮತ್ತು ಆಟದ ದೀರ್ಘ ಸ್ವರೂಪದಲ್ಲಿ ಆಡುವುದನ್ನು ಮುಂದುವರಿಸಬೇಕಿತ್ತು. ಕೊಹ್ಲಿ ಅವರು ಆಟಕ್ಕೆ ತರುವ ಶಕ್ತಿ, ಪ್ರೀತಿ ಮತ್ತು ಉತ್ಸಾಹವು ಟೀಂ ಇಂಡಿಯಾ ಯಾವುದೇ ಪರಿಸ್ಥಿತಿಯಲ್ಲಿ ಗೆಲ್ಲಬಹುದು ಎಂದು ನಂಬುವಂತೆ ಮಾಡಿದೆ ಎಂದಿದ್ದಾರೆ.
'ವಿರಾಟ್ ಏಕದಿನ ಪಂದ್ಯಗಳನ್ನು ಆಡುವುದನ್ನು ಬಿಟ್ಟು ಟೆಸ್ಟ್ ಕ್ರಿಕೆಟ್ ಆಡುವುದನ್ನು ಮುಂದುವರಿಸಬೇಕಿತ್ತು. ಕ್ರಿಕೆಟ್‌ಗೆ ನೀಡಲು ತಮ್ಮ ಬಳಿ ಏನೂ ಇಲ್ಲ ಎಂದು ಸ್ವತಃ ಅವರಿಗೆ ಅನ್ನಿಸುವವರೆಗೆ ಆಡಬೇಕಿತ್ತು. ಟೆಸ್ಟ್ ಕ್ರಿಕೆಟ್ ಅವರನ್ನು ಮಿಸ್ ಮಾಡಿಕೊಳ್ಳುತ್ತದೆ. ಒಬ್ಬ ಆಟಗಾರನಾಗಿ ಮಾತ್ರವಲ್ಲ, ಅವರು ತಂದ ಶಕ್ತಿ, ಪ್ರೀತಿ ಮತ್ತು ಉತ್ಸಾಹ ತಂಡವು ಯಾವುದೇ ಪರಿಸ್ಥಿತಿಯಲ್ಲಿ ಗೆಲ್ಲಬಹುದು ಎಂಬುದನ್ನು ತೋರಿಸಿದೆ' ಎಂದು ಗೋಸ್ವಾಮಿ ಬರೆದಿದ್ದಾರೆ.
ಕೊಹ್ಲಿ ಅವರ ಕೊನೆಯ ಟೆಸ್ಟ್ ಸರಣಿ, ಬಾರ್ಡರ್-ಗವಾಸ್ಕರ್ ಟ್ರೋಫಿಯಾಗಿತ್ತು. ಸರಣಿಯಲ್ಲಿ ಶತಕವನ್ನು ಹೊರತುಪಡಿಸಿ, ಭಾರತದ ಮಾಜಿ ನಾಯಕ ಆಸ್ಟ್ರೇಲಿಯಾದ ಬೌಲರ್‌ಗಳ ವಿರುದ್ಧ ರನ್ ಗಳಿಸಲು ಹೆಣಗಾಡಿದರು. 10 ರಲ್ಲಿ 8 ಬಾರಿ ಅವರು ಹೊರಗಿನ ಆಫ್ ಸ್ಟಂಪ್ ಎಸೆತಗಳಿಗೆ ಔಟಾದರು. ಈ ವರ್ಷದ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ದೆಹಲಿ ಪರ ರಣಜಿ ಟ್ರೋಫಿ ಪಂದ್ಯದಲ್ಲಿ ಕೊಹ್ಲಿ ಭಾಗವಹಿಸಿದ್ದರು. ಇದು ಅವರು ಹೆಚ್ಚು ಕಾಲ ಟೆಸ್ಟ್ ಆಡಲು ಸಿದ್ಧರಿದ್ದಾರೆಂದು ಸೂಚಿಸಿತು. ಆದರೆ, ಮೇ ತಿಂಗಳಲ್ಲಿ ಟೆಸ್ಟ್ ನಿವೃತ್ತಿ ಹೊಂದಿದ ರೋಹಿತ್ ಶರ್ಮಾ ಅವರ ಹೆಜ್ಜೆಗಳನ್ನು ಅನುಸರಿಸುವ ಮೂಲಕ ನಿವೃತ್ತಿ ಘೋಷಿಸಿದರು.
ಭಾರತ vs ದಕ್ಷಿಣ ಆಫ್ರಿಕಾ 2ನೇ ಟೆಸ್ಟ್ ಬಗ್ಗೆ ಹೇಳುವುದಾದರೆ, ಭಾರತ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿತು. ರಿಷಭ್ ಪಂತ್ ಮತ್ತು ಪಡೆ ಕೇವಲ 27 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತು.
Advertisement