
ಏಷ್ಯಾ ಕಪ್ 2025ರ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತವು ಜಯ ಸಾಧಿಸಿದ ನಂತರ ವಿಜೇತ ತಂಡದ ಟ್ರೋಫಿಯನ್ನು ತೆಗೆದುಕೊಂಡು ಹೋಗಿದ್ದಕ್ಕಾಗಿ ತೀವ್ರ ಟೀಕೆಗೆ ಗುರಿಯಾಗಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರನ್ನು ಮಾಜಿ ಕ್ರಿಕೆಟಿಗ ಮದನ್ ಲಾಲ್ ಟೀಕಿಸಿದ್ದಾರೆ. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ನಖ್ವಿ ಅವರಿಂದ ಟ್ರೋಫಿಯನ್ನು ಪಡೆಯಲು ನಿರಾಕರಿಸಿತು.
ಭಾರತದ ನಿಲುವಿಗೆ ಕೋಪಗೊಂಡ ನಖ್ವಿ, ಸೂರ್ಯಕುಮಾರ್ ಯಾದವ್ ತಂಡಕ್ಕೆ ಟ್ರೋಫಿ ಹಸ್ತಾಂತರಿಸದಿರಲು ನಿರ್ಧರಿಸಿದರು. ಬದಲಾಗಿ, ಅವರು ಟ್ರೋಫಿ ಮತ್ತು ವಿಜೇತರ ಪದಕಗಳನ್ನು ದುಬೈನಲ್ಲಿರುವ ತಮ್ಮ ಹೋಟೆಲ್ ಕೋಣೆಗೆ ತೆಗೆದುಕೊಂಡು ಹೋದರು. ಭಾರತ ಅಜೇಯವಾಗಿ ಪ್ರಶಸ್ತಿಯನ್ನು ಎತ್ತಿ ಹಿಡಿದರೂ, ಎದುರಾಳಿ ತಂಡ ಪಾಕಿಸ್ತಾನದ ಆಟಗಾರರೊಂದಿಗೆ ಹ್ಯಾಂಡ್‌ಶೇಕ್ ನಿರಾಕರಿಸಿದ್ದು ಭಾರಿ ಚರ್ಚೆಗೆ ಗ್ರಾಸವಾಯಿತು.
ಇಂಡಿಯಾ ಟುಡೇ ಜೊತೆ ಮಾತನಾಡಿದ 1983ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಮದನ್ ಲಾಲ್, ನಖ್ವಿ ತಮ್ಮ ಮತ್ತು ಪಾಕಿಸ್ತಾನದ ಕ್ರಿಕೆಟ್ ಪರಂಪರೆಯನ್ನು ಕಳಂಕಿತಗೊಳಿಸಿದ್ದಾರೆ. ಇದೆಲ್ಲ ಆಗಬಾರದಿತ್ತು. ಆಟಗಾರರು ಅಭಿಮಾನಿಗಳ ಮುಂದೆ ಅಥವಾ ನೇರ ಟಿವಿಯಲ್ಲಿ ಟ್ರೋಫಿಯನ್ನು ಎತ್ತಿದಾಗ, ಅದು ಚೆನ್ನಾಗಿ ಕಾಣುತ್ತದೆ' ಎಂದು ಹೇಳಿದರು.
ನಖ್ವಿ ಅವರನ್ನು ಅಪ್ರಬುದ್ಧ ಎಂದು ಕರೆದ ಅವರು, 'ಕ್ರೀಡೆಯ ಬಗ್ಗೆ ಏನೂ ತಿಳಿದಿಲ್ಲದ ವ್ಯಕ್ತಿ ಅಂತಹ ಕೆಲಸವನ್ನು ಮಾತ್ರ ಮಾಡುತ್ತಾನೆ. ಮೊಹ್ಸಿನ್ ನಖ್ವಿಗೆ ಕ್ರೀಡೆಯ ಬಗ್ಗೆ ಯಾವುದೇ ಜ್ಞಾನವಿಲ್ಲ. ಕ್ರೀಡೆಯನ್ನು ಹೇಗೆ ಆಡಬೇಕು, ಹೇಗೆ ವರ್ತಿಸಬೇಕು ಎಂಬುದು ತಿಳಿದಿಲ್ಲ. ಪಂದ್ಯದ ನಂತರ ವೇದಿಕೆಯ ಮೇಲೆ ಭಾರತ ತಂಡದ ಅನೇಕರು ಇದ್ದರು. ಅವರು ಭಾರತ ತಂಡಕ್ಕೆ ಟ್ರೋಫಿಯನ್ನು ನೀಡುವಂತೆ ಬೇರೆಯವರಿಗೆ ಹೇಳಬೇಕಿತ್ತು. ಪಿಸಿಬಿ ಮುಖ್ಯಸ್ಥರು ತಮ್ಮ ಮತ್ತು ತಮ್ಮ ದೇಶದ ಖ್ಯಾತಿಯನ್ನು ನಾಶಪಡಿಸಿದ್ದಾರೆ' ಎಂದು ಅವರು ಹೇಳಿದರು.
'ಸೂರ್ಯಕುಮಾರ್ ಯಾದವ್ ಟ್ರೋಫಿಯನ್ನು ಪಡೆಯಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕಚೇರಿಗೆ ಏಕೆ ಹೋಗಬೇಕು? ಪಂದ್ಯಾವಳಿಯಲ್ಲಿ ಭಾರತ ಗೆದ್ದಿದೆ. ನೀವು ಅವರನ್ನು ಮೈದಾನದಲ್ಲಿ ಟ್ರೋಫಿಯೊಂದಿಗೆ ಆಚರಿಸಲು ಬಿಡಬೇಕಿತ್ತು. ಆದರೆ, ಅವರಿಗೆ ಯಾವುದೇ ಜ್ಞಾನವಿಲ್ಲ, ಅವರ ದೇಶದಲ್ಲಿ ಎಲ್ಲವನ್ನೂ ಸಶಸ್ತ್ರ ಪಡೆಗಳು ನಿರ್ಧರಿಸುತ್ತವೆ' ಎಂದು ಮದನ್ ಲಾಲ್ ಹೇಳಿದರು.
ಬಿಸಿಸಿಐ ಅಧಿಕಾರಿಗಳಿಗೆ, ಭಾರತೀಯ ತಂಡಕ್ಕೆ ಟ್ರೋಫಿ ನೀಡಲು ಸಿದ್ಧನಿದ್ದೇನೆ. ಆದರೆ, ಅವರು ತಮ್ಮಿಂದ ಅದನ್ನು ಪಡೆದರೆ ಮಾತ್ರ ಎಂದು ಎಸಿಸಿ ಸಭೆಯಲ್ಲಿ ನಖ್ವಿ ಹೇಳಿದ್ದಾರೆ.
Advertisement