
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ನಿರಾಕರಿಸಿದ ನಂತರ ಏಷ್ಯಾ ಕಪ್ ಟ್ರೋಫಿಯನ್ನು ಎಸಿಸಿಯ ದುಬೈ ಪ್ರಧಾನ ಕಚೇರಿಯಲ್ಲಿಟ್ಟು ಲಾಕ್ ಮಾಡಲಾಗಿದೆ ಎನ್ನಲಾಗಿದೆ. ಸೆಪ್ಟೆಂಬರ್ 28 ರಂದು ದುಬೈನಲ್ಲಿ ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದ ಬಳಿಕ ಭಾರತ ಪಾಕಿಸ್ತಾನದ ಸಚಿವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ನಂತರ ನಖ್ವಿ ಪ್ರಸ್ತುತಿ ಸಮಾರಂಭದಿಂದ ಟ್ರೋಫಿಯನ್ನು ತೆಗೆದುಕೊಂಡು ಹೋದರು. ಅಂದಿನಿಂದ ಅದು ಎಸಿಸಿ ಕಚೇರಿಯಲ್ಲಿದೆ.
ನಖ್ವಿ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧ್ಯಕ್ಷರು ಮತ್ತು ಆ ದೇಶದ ಆಂತರಿಕ ಸಚಿವರೂ ಆಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಉತ್ತುಂಗಕ್ಕೇರಿದೆ.
'ಅಂದಿನಿಂದ ಇಂದಿನವರೆಗೂ ಟ್ರೋಫಿ ದುಬೈನಲ್ಲಿರುವ ಎಸಿಸಿ ಕಚೇರಿಯಲ್ಲಿದೆ. ನಖ್ವಿ ಅವರ ಸ್ಪಷ್ಟ ಸೂಚನೆಗಳ ಪ್ರಕಾರ, ಅವರ ಅನುಮೋದನೆ ಇಲ್ಲದೆ ಮತ್ತು ವೈಯಕ್ತಿಕ ಉಪಸ್ಥಿತಿಯಿಲ್ಲದೆ ಅದನ್ನು ಯಾರಿಗೂ ಹಸ್ತಾಂತರಿಸಬಾರದು ಅಥವಾ ಸ್ಥಳಾಂತರಿಸಬಾರದು' ಎಂದು ನಖ್ವಿ ಅವರ ಆಪ್ತ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.
'ನಖ್ವಿ ಅವರು ಭಾರತೀಯ ತಂಡ ಅಥವಾ ಬಿಸಿಸಿಐಗೆ ವೈಯಕ್ತಿಕವಾಗಿ (ಅದು ಯಾವಾಗ ಸಂಭವಿಸುತ್ತದೆಯೋ ಆಗ) ಟ್ರೋಫಿಯನ್ನು ಹಸ್ತಾಂತರಿಸುವುದಾಗಿ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ' ಎಂದು ಅವರು ಹೇಳಿದರು.
ಇಡೀ ಏಷ್ಯಾ ಕಪ್ ಭಾರತ-ಪಾಕ್ ನಡುವಿನ ಹಗೆತನದಿಂದ ತುಂಬಿ ತುಳುಕುತ್ತಿತ್ತು. ಪಂದ್ಯಾವಳಿಯ ಉದ್ದಕ್ಕೂ ಭಾರತೀಯರು ಬದ್ಧ ವೈರಿಗಳೊಂದಿಗೆ ಕೈಕುಲುಕಲು ನಿರಾಕರಿಸಿದರು ಮತ್ತು ಎರಡೂ ಕಡೆಯ ಆಟಗಾರರು ರಾಜಕೀಯವಾಗಿ ಪ್ರಭಾವಿತರಾದ ಸನ್ನೆಗಳೊಂದಿಗೆ ಪರಸ್ಪರ ಅಪಹಾಸ್ಯ ಮಾಡಿದರು.
ಟ್ರೋಫಿಯೊಂದಿಗೆ ನಿರ್ಗಮಿಸಿದ ಅವರ ಕೃತ್ಯಕ್ಕೆ ಬಿಸಿಸಿಐ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಹೇಳಿದೆ. ನಖ್ವಿ ಅವರನ್ನು ಖಂಡಿಸುವ ಮತ್ತು ಐಸಿಸಿಯ ನಿರ್ದೇಶಕ ಸ್ಥಾನದಿಂದ ತೆಗೆದುಹಾಕುವ ಬಲವಾದ ಕ್ರಮ ಕೈಗೊಳ್ಳಬಹುದು ಎನ್ನಲಾಗಿದೆ.
'ಭಾರತೀಯ ತಂಡಕ್ಕೆ ಟ್ರೋಫಿಯನ್ನು ತಾವೇ ಹಸ್ತಾಂತರಿಸುವ ಮತ್ತು ಆ ಕಾರ್ಯಕ್ರಮದ ಅಧಿಕೃತ ಆತಿಥೇಯರಾಗಿದ್ದ ಬಿಸಿಸಿಐಗೆ ನೀಡಲು ನಿರಾಕರಿಸುವ ಯಾವುದೇ ಹಕ್ಕು ನಖ್ವಿ ಅವರಿಗೆ ಇಲ್ಲ ಎಂಬುದು ಬಿಸಿಸಿಐ ಸ್ಪಷ್ಟ ನಿಲುವಾಗಿದೆ. ಹೀಗಾಗಿ, ಪಿಸಿಬಿ ಅಥವಾ ನಖ್ವಿಗೆ ದೀರ್ಘಾವಧಿಯ ಪರಿಣಾಮಗಳೇನು ಎಂಬುದನ್ನು ಕಾದು ನೋಡಬೇಕಾಗಿದೆ' ಎಂದು ಮೂಲಗಳು ತಿಳಿಸಿವೆ.
Advertisement