ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಏಕದಿನ ಸರಣಿಗೂ ಮುನ್ನ ಮಂಗಳವಾರ ಬೆಳಿಗ್ಗೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಿದ್ದಾರೆ. ಟಿ20ಐ ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಕೊಹ್ಲಿ ಇದೀಗ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಇಬ್ಬರು ಮಕ್ಕಳೊಂದಿಗೆ ಲಂಡನ್‌ನಲ್ಲಿ ನೆಲೆಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ ಜೂನ್‌ನಲ್ಲಿ ದೇಶವನ್ನು ತೊರೆದ ನಾಲ್ಕು ತಿಂಗಳ ನಂತರ ಕೊಹ್ಲಿ ಭಾರತಕ್ಕೆ ಮರಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ವೈಟ್-ಬಾಲ್ ಸರಣಿಯ ಮೊದಲ ಏಕದಿನ ಪಂದ್ಯ ಅಕ್ಟೋಬರ್ 19 ರಿಂದ ಪರ್ತ್‌ನಲ್ಲಿ ಆರಂಭವಾಗಲಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಕೊಹ್ಲಿ ದೆಹಲಿ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವುದನ್ನು ಕಾಣಬಹುದು. ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಇಟ್ಟ ಬೇಡಿಕೆಯನ್ನು ತಿರಸ್ಕರಿಸಿದ ಕೊಹ್ಲಿ, ತಮ್ಮ ಕಾರನ್ನು ಹತ್ತಿದರು ಮತ್ತು ಟೀಂ ಇಂಡಿಯಾದ ಸಹ ಆಟಗಾರರನ್ನು ಸೇರಲು ತೆರಳಿದರು.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳು ಭಾರತೀಯ ಅಭಿಮಾನಿಗಳಿಗೆ ನಿಜವಾಗಿಯೂ ತೀವ್ರ ನಿರೀಕ್ಷೆ ಹುಟ್ಟುಹಾಕಿದೆ. ಈ ಸರಣಿ ಮೂಲಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮತ್ತೆ ಭಾರತದ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿದ್ದಾರೆ. 2024ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ನಂತರ ಇಬ್ಬರೂ ಆಟಗಾರರು ಟಿ20ಐಗಳಿಂದ ನಿವೃತ್ತಿ ಘೋಷಿಸಿದರು. ಮೇ ತಿಂಗಳಲ್ಲಿ ಈ ದಿಗ್ಗಜರು ತಮ್ಮ ಟೆಸ್ಟ್ ವೃತ್ತಿಜೀವನಕ್ಕೂ ನಿವೃತ್ತಿ ಘೋಷಿಸಿದರು. ಹೀಗಾಗಿ, ಇಬ್ಬರೂ ಯಾವುದೇ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ.
ಮಹತ್ವದ ಬೆಳವಣಿಗೆಯೊಂದರಲ್ಲಿ, ಶುಭಮನ್ ಗಿಲ್ ಅವರನ್ನು ಭಾರತದ ಏಕದಿನ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಈ ಮೊದಲು ರೋಹಿತ್ ಶರ್ಮಾ ತಂಡದ ನಾಯಕರಾಗಿದ್ದರು. ಇದೀಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲಿರುವ ರೋಹಿತ್ ಮತ್ತು ಕೊಹ್ಲಿ ಇಬ್ಬರೂ 2027ರ ಏಕದಿನ ವಿಶ್ವಕಪ್‌ವರೆಗೆ ಮುಂದುವರಿಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಭಾರತದ ಏಕದಿನ ತಂಡವು ಅಕ್ಟೋಬರ್ 15 ರಂದು ರಾಷ್ಟ್ರ ರಾಜಧಾನಿಯಿಂದ ಎರಡು ಪ್ರತ್ಯೇಕ ಬ್ಯಾಚ್‌ಗಳಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಲಿದ್ದು, ಲಾಜಿಸ್ಟಿಕ್ಸ್ ಮತ್ತು ಟಿಕೆಟ್ ಲಭ್ಯತೆಯ ಮೇಲೆ ಅಂತಿಮ ಪ್ರಯಾಣ ವೇಳಾಪಟ್ಟಿ ನಿರ್ಧಾರವಾಗಲಿದೆ.
ಬಿಸಿಸಿಐ (ಪಿಟಿಐ) ಮೂಲಗಳ ಪ್ರಕಾರ, ಆಟಗಾರರ ಒಂದು ಗುಂಪು ಬೆಳಿಗ್ಗೆ ಹೊರಡಲಿದ್ದು, ಎರಡನೇ ಬ್ಯಾಚ್ ಸಂಜೆ ನಂತರ ಹೊರಡುವ ಸಾಧ್ಯತೆಯಿದೆ. ಇದು ದೀರ್ಘ ಪ್ರಯಾಣದ ಬ್ಯುಸಿನೆಸ್ ಕ್ಲಾಸ್ ಟಿಕೆಟ್‌ಗಳ ಲಭ್ಯತೆಯನ್ನು ಅವಲಂಬಿಸಿರುತ್ತದೆ.
Advertisement