
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದು, ಮೊದಲ ಪಂದ್ಯದಲ್ಲೇ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. 6 ತಿಂಗಳಿಗಿಂತ ಹೆಚ್ಚು ಸಮಯದ ನಂತರ ತಂಡಕ್ಕೆ ಮರಳಿದ್ದ ಭಾರತದ ಅನುಭವಿ ಆಟಗಾರರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತದ ಪರ ರೋಹಿತ್ ಶರ್ಮಾ ತಮ್ಮ ಉತ್ತರಾಧಿಕಾರಿ ಶುಭಮನ್ ಗಿಲ್ ಅವರೊಂದಿಗೆ ಬ್ಯಾಟಿಂಗ್‌ಗೆ ಬಂದರು. 38 ವರ್ಷದ ರೋಹಿತ್ ಶರ್ಮಾ ಅವರಿಗಿದು 500ನೇ ಅಂತರರಾಷ್ಟ್ರೀಯ ಪಂದ್ಯವಾಗಿದ್ದು, ರಕ್ಷಣಾತ್ಮಕ ಆಟವಾಡುತ್ತಾ, ಎರಡು ಸಿಂಗಲ್ಸ್‌ಗಳಿಗೆ ಪಂಚ್ ಮಾಡಿದರು. ಮಿಚೆಲ್ ಸ್ಟಾರ್ಕ್ ಮತ್ತು ಜಾಶ್ ಹೇಜಲ್‌ವುಡ್ ಹಿಡಿತದ ಬೌಲಿಂಗ್ ಮಾಡಿದರು. ಹೇಜಲ್‌ವುಡ್ ಎಸೆತದಲ್ಲಿ ಬೌಂಡರಿ ಬಾರಿಸಲು ಪ್ರಯತ್ನಿಸಿದ ರೋಹಿತ್ ವಿಕೆಟ್ ಒಪ್ಪಿಸಿದರು. ಹೀಗಾಗಿ ಅವರು 14 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿದರು.
ರೋಹಿತ್ ವಿಕೆಟ್ ಬಳಿಕ ವಿರಾಟ್ ಕೊಹ್ಲಿ ಮೈದಾನಕ್ಕೆ ನಡೆದು ಬರುವಾಗ ಹರ್ಷೋದ್ಗಾರಗಳು ಮೊಳಗಿದವು. ಆದರೆ, ಅದು ಹೆಚ್ಚು ಹೊತ್ತು ಉಳಿಯಲಿಲ್ಲ. ಕೊಹ್ಲಿ 8 ಡಾಟ್ ಬಾಲ್‌ಗಳನ್ನು ಆಡಿದರು. ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಕೂಪರ್ ಕೊನೊಲಿ ಅವರಿಗೆ ಕ್ಯಾಚ್ ನೀಡಿ ಶೂನ್ಯಕ್ಕೆ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಪರಿಸ್ಥಿತಿ ಎಂತದ್ದೇ ಇದ್ದರೂ, ಸಿಂಗಲ್ಸ್ ಮತ್ತು ಡಬಲ್ಸ್‌ಗಳೊಂದಿಗೆ ಸ್ಕೋರ್‌ಬೋರ್ಡ್ ಅನ್ನು ಮೇಲೆ ಕೊಂಡೊಯ್ಯುತ್ತಿದ್ದ 36 ವರ್ಷದ ಕೊಹ್ಲಿಗೆ ಇಂದು ಅದೃಷ್ಟ ಕೈಕೊಟ್ಟಿತ್ತು.
ಈಗಾಗಲೇ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ರೋಹಿತ್ ಮತ್ತು ವಿರಾಟ್ ಕೇವಲ ಏಕದಿನ ಮಾದರಿಯಲ್ಲಿ ಸಕ್ರಿಯರಾಗಿದ್ದಾರೆ. ಇಬ್ಬರೂ 2027ರಲ್ಲಿ ವಿಶ್ವಕಪ್ ಆಡುವ ಗುರಿಯನ್ನು ಹೊಂದಿದ್ದಾರೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಟೀಂ ಇಂಡಿಯಾದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, ಅನುಭವಿ ಆಟಗಾರರನ್ನು ಪ್ರತಿ ಪಂದ್ಯದಲ್ಲೂ ಪರೀಕ್ಷೆಗೆ ಒಳಪಡಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಆದಾಗ್ಯೂ, ರೋಕೊ ಅವರ ಪುನರಾಗಮನವು ಪರ್ತ್‌ನಲ್ಲಿನ ನಿರಾಶದಾಯಕವಾಗಿದೆ.
Advertisement