'ಭಾರತ ಗೆಲ್ಲಬೇಕಾದರೆ ಅಜಿತ್ ಅಗರ್ಕರ್, ಗೌತಮ್ ಗಂಭೀರ್‌ರನ್ನು ತೆಗೆದುಹಾಕಬೇಕು': ವೈರಲ್ ಪೋಸ್ಟ್ ಬಗ್ಗೆ ನವಜೋತ್ ಸಿಂಗ್ ಸಿಧು
ಸಾಮಾಜಿಕ ಮಾಧ್ಯಮದಲ್ಲಿ ಸಾಮಾನ್ಯವಾಗಿ ಸೆಲೆಬ್ರಿಟಿಗಳದ್ದೇ ಎಂದು ಹೇಳಲಾಗುವ ಪೋಸ್ಟ್‌ಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಬಳಿಕ ಅವುಗಳು ನಕಲಿ ಎಂಬುದು ತಿಳಿಯುತ್ತದೆ. ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಕೂಡ ಇತ್ತೀಚೆಗೆ ಅಂತಹ ಒಂದು ನಕಲಿ ಉಲ್ಲೇಖಕ್ಕೆ ಸಿಲುಕಿಕೊಂಡಿದ್ದರು. ಭಾರತ vs ಆಸ್ಟ್ರೇಲಿಯಾ ಸರಣಿಗೂ ಮುನ್ನ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ, 'ಭಾರತ 2027ರ ವಿಶ್ವಕಪ್ ಗೆಲ್ಲಲು ಬಯಸಿದರೆ, ಬಿಸಿಸಿಐ ಅಜಿತ್ ಅಗರ್ಕರ್ ಮತ್ತು ಗೌತಮ್ ಗಂಭೀರ್ ಅವರನ್ನು ಆದಷ್ಟು ಬೇಗ ತೆಗೆದುಹಾಕಬೇಕು ಮತ್ತು ಪೂರ್ಣ ಗೌರವದೊಂದಿಗೆ ಮತ್ತೆ ರೋಹಿತ್ ಶರ್ಮಾ ಅವರಿಗೆ ನಾಯಕತ್ವವನ್ನು ಹಸ್ತಾಂತರಿಸಬೇಕು' ಎಂದು ಹೇಳಲಾಗಿದೆ. ಇದನ್ನು ಸಿಧು ಹೇಳಿದ್ದಾರೆ ಎಂದು ಬಿಂಬಿಸಲಾಗಿದೆ.
'ಈ ರೀತಿ ಎಂದಿಗೂ ಹೇಳಿಲ್ಲ, ನಕಲಿ ಸುದ್ದಿ ಹರಡದಿರಿ, ಈ ರೀತಿ ಊಹಿಸಿಯೂ ಇರಲಿಲ್ಲ. ನಿಮಗೆ ನಾಚಿಕೆಯಾಗಬೇಕು' ಎಂದು X ನಲ್ಲಿ ನವಜೋತ್ ಸಿಂಗ್ ಸಿಧು ನಕಲಿ ಫೋಟೊ ಹಂಚಿಕೊಂಡಿದ್ದಾರೆ.
ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷರಾದ ಅಜಿತ್ ಅಗರ್ಕರ್ ಮತ್ತು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ನೇತೃತ್ವದಲ್ಲಿ, ಸದ್ಯ ಭಾರತೀಯ ಕ್ರಿಕೆಟ್ ತಂಡವು ಪರಿವರ್ತನೆಯ ಹಂತದಲ್ಲಿದೆ. ಶುಭಮನ್ ಗಿಲ್ ಅವರನ್ನು ಏಕದಿನ ಮತ್ತು ಟೆಸ್ಟ್ ತಂಡಗಳಿಗೆ ನಾಯಕರನ್ನಾಗಿ ನೇಮಿಸಲಾಗಿದೆ. 2027ರ ಏಕದಿನ ವಿಶ್ವಕಪ್‌ಗೆ ಇನ್ನೂ ಎರಡು ವರ್ಷ ಕಾಲಾವಕಾಶವಿದ್ದು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡುವ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗೆ, NDTV ವಿಶ್ವ ಶೃಂಗಸಭೆ 2025 ರಲ್ಲಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಸಾಧ್ಯತೆಗಳ ಬಗ್ಗೆ ಅಗರ್ಕರ್ ಅವರನ್ನು ಕೇಳಿದಾಗ, ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪ್ರತಿಕ್ರಿಯಿಸಿದರು.
'ಅವರು ಆಸ್ಟ್ರೇಲಿಯಾದಲ್ಲಿ ಸದ್ಯದ ತಂಡದ ಭಾಗವಾಗಿದ್ದಾರೆ. ಅವರು ಅದ್ಭುತ ಆಟಗಾರರು, ಆದರೆ ವೈಯಕ್ತಿಕ ಪ್ರದರ್ಶನಗಳನ್ನು ಗಮನದಲ್ಲಿಟ್ಟುಕೊಂಡು ಆಡುವ ವೇದಿಕೆ ಇದಲ್ಲ. ಎರಡು ವರ್ಷಗಳ ನಂತರ, ಪರಿಸ್ಥಿತಿಯನ್ನು ಊಹಿಸುವುದು ಕಷ್ಟ. ಯಾರಿಗೆ ಗೊತ್ತು, ಕಿರಿಯ ಆಟಗಾರರು ಹೊರಹೊಮ್ಮಿ ಆ ಸ್ಥಾನಗಳನ್ನು ಪಡೆಯಬಹುದು. ಇಬ್ಬರೂ ಉತ್ತಮ ಆಟಗಾರರು ಮತ್ತು ಅವರನ್ನು ಪ್ರತಿ ಪಂದ್ಯದಲ್ಲೂ ನಿರ್ಣಯಿಸುವುದು ಸರಿಯಲ್ಲ. ಅವರು ಆಡಲು ಪ್ರಾರಂಭಿಸಿದ ನಂತರ, ನಾವು ಪರಿಸ್ಥಿತಿಯನ್ನು ನಿರ್ಣಯಿಸುತ್ತೇವೆ. ಇದು ಕೇವಲ ರನ್ ಗಳಿಸುವುದಷ್ಟೇ ಅಲ್ಲ, ಟ್ರೋಫಿಗಳನ್ನು ಗೆಲ್ಲುವುದರ ಬಗ್ಗೆ. ಅವರು ಆಸ್ಟ್ರೇಲಿಯಾ ಸರಣಿಯಲ್ಲಿ ಮೂರು ಶತಕಗಳನ್ನು ಗಳಿಸಿದರೆ, ಅವರು 2027ರ ವಿಶ್ವಕಪ್ ಅನ್ನು ಆಡುತ್ತಾರೆ ಎಂದಲ್ಲ. ನಾವು ಒಟ್ಟಾರೆ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು' ಎಂದು ಅಗರ್ಕರ್ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ