
ಏಳು ತಿಂಗಳಿಗೂ ಹೆಚ್ಚು ಕಾಲದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಮರಳಿದ್ದು, ಲಕ್ಷಾಂತರ ಅಭಿಮಾನಿಗಳ ಆಸೆ ಈಡೇರಿದೆ. ಭಾನುವಾರ ಭಾರತದ ಜೆರ್ಸಿಯಲ್ಲಿ ಕ್ರಿಕೆಟ್ ಮೈದಾನದಲ್ಲಿ ಕಿಂಗ್ ಕೊಹ್ಲಿ ಕಾಣಿಸಿಕೊಂಡಿದ್ದು ಸ್ವಾಗತಾರ್ಹ ದೃಶ್ಯವಾಗಿತ್ತು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಸ್ಟಾರ್ ಬ್ಯಾಟರ್‌ನ ಪ್ರತಿ ಕ್ಷಣವನ್ನು ಸವಿದರು. ಭಾರತದ ಫೀಲ್ಡಿಂಗ್ ಸಮಯದಲ್ಲಿ ಕೊಹ್ಲಿ ಬೌಲರ್‌ಗಳು ಮತ್ತು ನಾಯಕ ಶುಭಮನ್ ಗಿಲ್ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದು ಕಂಡುಬಂತು.
ಭಾರತದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ಗೆ ಮರಳುವುದು ಅತ್ಯಂತ ನಿರಾಶಾದಾಯಕ ರೀತಿಯಲ್ಲಿ ಕೊನೆಗೊಂಡಿತು. ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎಂಟು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾಗಿದ್ದರು. ಅವರು ಔಟಾದಾಗ, ಭಾರತ ಏಳು ಓವರ್‌ಗಳ ನಂತರ 2 ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಆಸ್ಟ್ರೇಲಿಯಾದ ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಕೂಪರ್ ಕೊನೊಲಿ ಅವರು ಕ್ಯಾಚ್ ಹಿಡಿದು ಕೊಹ್ಲಿಯನ್ನು ಪೆವಿಲಿಯನ್ ಕಡೆಗೆ ಕಳುಹಿಸಿದರು.
ಮಾರ್ಚ್ 9 ರಂದು ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದ ನಂತರ ಕೊಹ್ಲಿ ಮೊದಲ ಬಾರಿಗೆ ಏಕದಿನ ಪಂದ್ಯಕ್ಕೆ ಮರಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಫೈನಲ್ ನಂತರ, ಅವರು ಜೂನ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಸ್ಪರ್ಧಿಸಿದ್ದರು ಮತ್ತು ಅದಾದ ಬಳಿಕ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಜೂನ್‌ನಲ್ಲಿ ಐಪಿಎಲ್ ಮುಗಿದ ಬಳಿಕ ಕುಟುಂಬದೊಂದಿಗೆ ಲಂಡನ್‌ನಲ್ಲಿ ನೆಲೆಸಿದ್ದರು. ಜೇಮ್ಸ್ ಆಂಡರ್ಸನ್ ನಂತರ ಎಲ್ಲ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿಯನ್ನು ಎರಡು ಬಾರಿ ಶೂನ್ಯಕ್ಕೆ ಔಟ್ ಮಾಡಿದ ಎರಡನೇ ಬೌಲರ್ ಮಿಚೆಲ್ ಸ್ಟಾರ್ಕ್ ಆಗಿದ್ದಾರೆ.
ಕೊಹ್ಲಿಗಿಂತ ಮೊದಲು, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ರೋಹಿತ್ ಶರ್ಮಾ ಅವರು ನಿರಾಶಾದಾಯಕ ಪ್ರದರ್ಶನ ನೀಡಿದರು. ಕೇವಲ ಎಂಟು ರನ್ ಗಳಿಸಿ ಜಾಶ್ ಹೇಜಲ್‌ವುಡ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಭಾರತದ ಪರ ಇದು ರೋಹಿತ್ ಅವರ 500ನೇ ಅಂತರರಾಷ್ಟ್ರೀಯ ಪಂದ್ಯವಾಗಿತ್ತು.
Advertisement