
ಟೆಸ್ಟ್ ಮತ್ತು ಟಿ20ಐ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಸಕ್ರೀಯವಾಗಿದ್ದು, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತದ ತಂಡ ಸೇರಿಕೊಂಡಿದ್ದಾರೆ. ಭಾನುವಾರ ಪರ್ತ್‌ನಲ್ಲಿ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಕೊಹ್ಲಿ ಎಂಟು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾದರೆ, ರೋಹಿತ್ 14 ಎಸೆತಗಳನ್ನು ಎದುರಿಸಿ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು.
ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯು ಸ್ಟಾರ್ ಜೋಡಿಗೆ ಅತ್ಯಂತ ನಿರ್ಣಾಯಕವಾಗಿದೆ. ಸದ್ಯದ ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ಸ್ಥಿರವಾದ ಪ್ರದರ್ಶನ ನೀಡಬೇಕಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಮತ್ತು ರೋಹಿತ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದ ನಂತರ, ಭಾರತದ ಮಾಜಿ ತಾರೆ ವರುಣ್ ಆರನ್ ಇದೀಗ ಒಂದು ಸಲಹೆ ನೀಡಿದ್ದಾರೆ.
'ಇಬ್ಬರೂ ದೇಶೀಯ ಕ್ರಿಕೆಟ್ ಆಡಬೇಕು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ನವೆಂಬರ್‌ನಲ್ಲಿ ಪ್ರಾರಂಭವಾಗುತ್ತದೆ ಮತ್ತು ನಂತರ ವಿಜಯ್ ಹಜಾರೆ ಟ್ರೋಫಿ ಡಿಸೆಂಬರ್‌ನಲ್ಲಿ ಪ್ರಾರಂಭವಾಗುತ್ತದೆ. ಆಟದೊಂದಿಗೆ ಕನೆಕ್ಟ್ ಆಗಿರಲು ಅದು ಉತ್ತಮ ಮಾರ್ಗವಾಗಿದೆ. ಎಂಎಸ್ ಧೋನಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದಾಗ, ಅವರು ಕೆಲವು ಸೈಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಹಜಾರೆ ಟ್ರೋಫಿಗಳನ್ನು ಆಡಿದ್ದರು ಎಂಬುದು ನನಗೆ ನೆನಪಿದೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಆ ಬಗ್ಗೆ ಗಮನಹರಿಸುತ್ತಾರೆ ಎಂಬು ಭಾವಿಸುತ್ತೇನೆ. ನೀವು ಈಗ ಎರಡು ಸ್ವರೂಪಗಳನ್ನು ಆಡುತ್ತಿಲ್ಲ. ಹೀಗಾಗಿ, ಪಂದ್ಯದ ಅಭ್ಯಾಸದ ಅಗತ್ಯವಿದೆ' ಎಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಆರನ್ ಹೇಳಿದರು.
ಭಾರತ ಪರ 500ನೇ ಅಂತರರಾಷ್ಟ್ರೀಯ ಪಂದ್ಯವಾಡಿದ ರೋಹಿತ್, ಜಾಶ್ ಹೇಜಲ್‌ವುಡ್ ಅವರ ಎಸೆತದಲ್ಲಿ ಚೊಚ್ಚಲ ಆಟಗಾರ ಮ್ಯಾಥ್ಯೂ ರೆನ್‌ಶಾ ಚೆಂಡನ್ನು ಹಿಡಿದಾಗ ಔಟಾದರು.
ಅಭಿಮಾನಿಗಳ ಕೂಗಾಟದ ಮಧ್ಯೆ ಕ್ರೀಡಾಂಗಣಕ್ಕೆ ಆಗಮಿಸಿದ ಕೊಹ್ಲಿಗೆ ಯಾವುದೇ ಮೋಡಿ ಮಾಡಲು ಸಾಧ್ಯವಾಗಲಿಲ್ಲ. ಮಿಚೆಲ್ ಸ್ಟಾರ್ಕ್ ಅವರ ಎಸೆತದಲ್ಲಿ ಕೂಪರ್ ಕೊನೊಲಿ ಅದ್ಭುತ ಕ್ಯಾಚ್ ಪಡೆದು ಕೊಹ್ಲಿಯ ಇನಿಂಗ್ಸ್ ಅನ್ನು ಕೊನೆಗೊಳಿಸಿದರು.
ಆಸ್ಟ್ರೇಲಿಯಾದಲ್ಲಿ ಕೊಹ್ಲಿಯ ಮೊದಲ ಡಕೌಟ್ ಇದಾಗಿದ್ದು, ಮುಂದಿನ ಅಡಿಲೇಡ್ ಮತ್ತು ಸಿಡ್ನಿಯಲ್ಲಿ ನಡೆಯಲಿರುವ ಏಕದಿನ ಪಂದ್ಯಗಳಲ್ಲಿ ಅನುಭವಿಗಳು ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸಬೇಕಾಗಿದೆ.
Advertisement